ದಾವಣಗೆರೆ:ಅಮೆರಿಕದ ಮೇರಿ ಲ್ಯಾಂಡ್ ರಾಜ್ಯದ ಬಾಲ್ಟಿಮೋರ್‌ನಲ್ಲಿ ಇತ್ತೀಚೆಗೆ ನಿಗೂಢವಾಗಿ ಮೃತಪಟ್ಟ ದಾವಣಗೆರೆ ಮೂಲದ ದಂಪತಿ ಹಾಗೂ ಮಗುವಿನ ಅಂತ್ಯಸಂಸ್ಕಾರವನ್ನು ಅಲ್ಲಿಯೇ ನೆರವೇರಿಸಲು ಸಿದ್ಧತೆ ನಡೆಸಲಾಗಿದೆ. ಈಟಿವಿ ಭಾರತ ಜೊತೆ ದೂರವಾಣಿ ಮೂಲಕ ಮಾತನಾಡಿದ ಮೃತರ ಕುಟುಂಬಸ್ಥರು ಇಂದು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಗಸ್ಟ್ 15 ರಂದು ಅಮೆರಿಕದ ನಿವಾಸದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ದಂಪತಿ ಯೋಗೇಶ್ ಹೊನ್ನಾಳ್, ಪ್ರತಿಭಾ ಹಾಗೂ ಪುತ್ರ ಯಶ್ ನಿಗೂಢವಾಗಿ ಮೃತಪಟ್ಟಿದ್ದರು. ಈ ಘಟನೆ ಅಗಸ್ಟ್ 18ಕ್ಕೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಸಾಫ್ಟ್ವೇರ್ ಇಂಜಿನಿಯರ್ ಯೋಗೇಶ್ ಹೊನ್ನಾಳ್ ಅವರ ತಾಯಿ, ಸಹೋದರ ಪುನೀತ್ ಹೊನ್ನಾಳ್ ಈಗಾಗಲೇ ಚೆನ್ನೈ ಮೂಲಕ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅವರು ಪುತ್ರ, ಸೊಸೆ ಹಾಗೂ ಮೊಮ್ಮಗನ ಅಂತ್ಯಸಂಸ್ಕಾರದಲ್ಲಿಂದು ಭಾಗಿಯಾಗಲಿದ್ದಾರೆ.
ದೂರವಾಣಿ ಮೂಲಕ ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಕುಟುಂಬದ ಸದಸ್ಯ ಸಂತೋಷ್ ಅವರು, ಮೃತ ಮೂವರ ಅಂತ್ಯಸಂಸ್ಕಾರವನ್ನು ಇಂದು (ಶನಿವಾರ) ನೆರವೇರಿಸಲು ನಿರ್ಧಾರ ಮಾಡಲಾಗಿದೆ. ಅಮೆರಿಕದ ಕಾಲಮಾನ ಪ್ರಕಾರ 2:00 ಗಂಟೆಗೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಭಾರತದ ಕಾಲಮಾನ ಪ್ರಕಾರ ಇಂದು ರಾತ್ರಿ 11:30ಕ್ಕೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದಿದ್ದಾರೆ. ಅಲ್ಲದೇ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಮಾಹಿತಿ ನೀಡಿರುವ ಅಮೆರಿಕದ ಮೇರಿ ಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ಪೊಲೀಸರು, ಈ ಸಾಮೂಹಿಕ ಸಾವಿಗೆ ನಿರ್ದಿಷ್ಟ ಕಾರಣ ಮಾತ್ರ ತಿಳಿಸಿಲ್ಲ. ಅಂತ್ಯಸಂಸ್ಕಾರದ ಬಳಿಕವೇ ನಿಖರ ಕಾರಣ ತಿಳಿದು ಬರಬಹುದು ಎಂದಿದ್ದಾರೆ.
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಶಂಕೆ:ಮೃತ ಯೋಗೇಶ್ ಹೊನ್ನಾಳ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆಂದು ಬಾಲ್ಟಿಮೋರ್ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಮೊದಲು ಪತ್ನಿ ಪ್ರತಿಭಾ, ಪುತ್ರ ಯಶ್ಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಬಳಿಕ ತಾನೂ ಸಾವಿಗೆ ಶರಣಾಗಿದ್ದಾರೆ ಎಂದು ವರದಿ ನೀಡಿರುವುದಾಗಿ ಅವರ ಕುಟುಂಬದ ಮೂಲಗಳು ತಿಳಿಸಿವೆ.