ದಾವಣಗೆರೆ: ಮುಂಗಾರು ಪೂರ್ವ ಮಳೆಯಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ. ಇತ್ತ ಗ್ರಾಮೀಣ ಪ್ರದೇಶದ ಜನರ ಬದುಕು ಬರಡಾಗಿದೆ. ರಕ್ಕಸ ಮಳೆಯಿಂದ ಜನಸಾಮಾನ್ಯರು ಮನೆ-ಮಠ ಬಿಟ್ಟು ಗಂಟುಮೂಟೆ ಕಟ್ಟಿಕೊಂಡು ಅಲ್ಲಿಂದ ಹೊರಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದ ರೈತರ ಬದುಕು ಹಸನಾಗುವ ಬದಲು ನೀರುಪಾಲಾಗಿದ್ದು, ದಾವಣಗೆರೆ ಜಿಲ್ಲೆಯ ಜನರ ಜೀವನ ಅಯೋಮಯವಾಗಿದೆ.
ಮುಂಗಾರು ಪೂರ್ವ ಮಳೆ ದಾವಣಗೆರೆ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ರೈತರು ಬೆಳೆದ ಬೆಳೆ ನೀರುಪಾಲಾಗಿದೆ. ಕೆಲವೇ ದಿನಗಳಲ್ಲಿ ರೈತರ ಕೈಸೇರಬೇಕಾಗಿದ್ದ 2,651 ಎಕರೆ ಭತ್ತ ಹಾನಿಗೊಳಗಾಗಿದೆ. ಇತ್ತ ತೋಟಗಾರಿಕೆ ಬೆಳೆ ಕೂಡ ನೆಲಕಚ್ಚಿರುವುದು ರೈತರಿಗೆ ಎಲ್ಲಿಲ್ಲದ ನಷ್ಟ ಸಂಭವಿಸಿದೆ. ಆದರೆ, ಇದಕ್ಕೆ ಪರಿಹಾರ ಕಟ್ಟಿಕೊಡುವ ಅಧಿಕಾರಿ ವರ್ಗ ಮಾತ್ರ ಫೋಟೋಗಳಿಗೆ ಸೀಮಿತವಾಗಿದ್ದಾರೆ ವಿನಃ ರೈತರ ಕಣ್ಣೀರನ್ನು ಒರೆಸುವ ಕೆಲಸ ಅವರಿಂದ ಆಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.