ದಾವಣಗೆರೆ:ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ಯುದ್ಧ ಪ್ರಾರಂಭವಾಗಿದ್ದು, ಸಾಕಷ್ಟು ಭಾರತೀಯರು ಕೂಡ ಇಸ್ರೇಲ್ನಲ್ಲಿ ಸಿಲುಕಿದ್ದಾರೆ. ದಾವಣಗೆರೆ ಮೂಲದ ಕೆ.ಹೆಚ್.ಬಿ ಕಾಲೋನಿಯ ನಿವಾಸಿ ಹೀಲ್ಡಾ ಮೋಂಥೇರೋ ಎಂಬ ಮಹಿಳೆ ಇಸ್ರೇಲ್ನ ತಿಬೇರಿ ಎನ್ನುವ ಸ್ಥಳದಲ್ಲಿ ವಾಸವಾಗಿದ್ದಾರೆ. ಹೀಗಾಗಿ, ಮೊದಲು ಕುಟುಂಬಸ್ಥರನ್ನು ಆತಂಕ ಕಾಡಿತ್ತು. ಆದರೆ ಮಹಿಳೆ ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ತಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಹೀಲ್ಡಾ ಮೋಂಥೇರೋ ಹಲವು ವರ್ಷಗಳಿಂದ ತಿಬೇರಿಯಲ್ಲಿ ಹೋಮ್ ಟೇಕರ್ ಕಾರ್ಯನಿರ್ವಹಿಸುತ್ತಿದ್ದಾರೆ. ಯುದ್ಧ ಸನ್ನಿವೇಶದಿಂದ ಆತಂಕಗೊಂಡಿರುವ ಇವರ ಪತಿ, ನಿವೃತ್ತ ಮುಖ್ಯ ಶಿಕ್ಷಕ ಅಮ್ರೋಸ್ ಅವರಿಗೆ ಪ್ರತಿದಿನ ಕರೆ ಮಾಡುತ್ತಾರೆ. ''ಯಾವುದೇ ತೊಂದರೆ ಇಲ್ಲ. ಸುರಕ್ಷಿತವಾಗಿದ್ದೇವೆ. ಯುದ್ಧ ನಡೆಯುತ್ತಿರುವ ಸ್ಥಳದಿಂದ ನೂರು ಕಿಲೋಮೀಟರ್ ದೂರದಲ್ಲಿದ್ದೇವೆ. ಶೆಲ್, ಬಾಂಬ್ ದಾಳಿ, ಯುದ್ದ ವಿಮಾನಗಳ ಶಬ್ದ ಕೇಳಿಸುತ್ತಿದೆ. ಯುದ್ದ ಪ್ರಾರಂಭವಾದಾಗ ಮುಂಜಾಗ್ರತಾ ಕ್ರಮವಾಗಿ ಬಂಕರ್‌ಗಳಿಗೆ ಹೋಗಲು ಹೇಳುತ್ತಾರೆ ಎಂದು ತಿಳಿಸಿದ್ದಾರೆ'' ಎನ್ನುತ್ತಾರೆ ಅಮ್ರೋಸ್.