ದಾವಣಗೆರೆ:ಜುಲೈನಲ್ಲಿ ಅಂತಿಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸಲು ದಾವಣಗೆರೆ ವಿಶ್ವವಿದ್ಯಾನಿಲಯ ಸಿದ್ಧತೆ ಮಾಡಿಕೊಂಡಿದೆ.
ದಾವಣಗೆರೆ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳ ಅಧ್ಯಕ್ಷರು, ಸಂಯೋಜನಾಧಿಕಾರಿಗಳು, ಸಿಂಡಿಕೇಟ್ ಸದಸ್ಯರು ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರ ಜೊತೆ ವಿಡಿಯೊ ಕಾನ್ಫರೆನ್ಸ್ ನಡೆಸಿ, ಎಲ್ಲರ ಸಲಹೆ ಪಡೆದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಜೂನ್ ತಿಂಗಳಲ್ಲಿ ಮೂರು ವಾರಗಳ ರಜೆರಹಿತ ನಿರಂತರ ತರಗತಿ ನಡೆಸಿ, ಪಾಠದ ಪುನರಾವಲೋಕನ ಮಾಡಲಾಗುವುದು ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದ್ದಾರೆ.
ಇದೇ ಅವಧಿಯಲ್ಲಿ ಪ್ರಾಯೋಗಿಕ ತರಬೇತಿ, ಕಿರು ಸಂಶೋಧನಾ ವರದಿ, ಪ್ರಾಜೆಕ್ಟ್, ಆಂತರಿಕ ಪರೀಕ್ಷೆ, ಪ್ರಾಯೋಗಿಕ ಅಧ್ಯಯನ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಒಂದು ವಾರ ಪರೀಕ್ಷಾ ಸಿದ್ಧತೆಗೆ ಅವಕಾಶ ನೀಡಿ, ಜುಲೈನಲ್ಲಿ ಪರೀಕ್ಷೆ ನಡೆಸಲಾಗುವುದು. ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮೊದಲು ಪರೀಕ್ಷೆ ನಡೆಸಿ, ಶೀಘ್ರ ಫಲಿತಾಂಶ ಪ್ರಕಟಿಸಲಾಗುವುದು ಎಂದರು.
ಎಂಬಿಎ, ಬಿಇಡಿ, ಬಿಪಿಇಡಿ, ಎಂಇಡಿ ಪದವಿಗಳ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ 4 ರಿಂದ 6 ವಾರಗಳ ಕಾಲ ಪಾಠ ಪ್ರವಚನ, ಪ್ರಾಯೋಗಿಕ ತರಗತಿ, ಆಂತರಿಕ ಪರೀಕ್ಷೆ, ಬೋಧನಾ ಶಿಕ್ಷಣಕ್ಕೆ ಒತ್ತು ನೀಡಲಾಗುವುದು. ಸ್ನಾತಕ ಪದವಿಯ 3 ಮತ್ತು 5ನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್ಗೆ ಆಗಸ್ಟ್ 1 ರಿಂದ ಹಾಗೂ ಒಂದನೇ ಸೆಮಿಸ್ಟರ್ಗೆ ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 1ರಿಂದ ತರಗತಿಗಳು ಆರಂಭವಾಗಲಿವೆ. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಮುಂದಿನ ಆದೇಶದವರೆಗೆ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಲಾಕ್‍ಡೌನ್‍ಗಿಂತ ಮುಂಚೆ ಪದವಿ ಕಾಲೇಜಿನಲ್ಲಿ ಶೇ 75 ರಿಂದ 80 ರಷ್ಟು ಪಠ್ಯಕ್ರಮ ಮುಗಿದಿತ್ತು. ಲಾಕ್‍ಡೌನ್ ಅವಧಿಯಲ್ಲಿ ಬಹುತೇಕ ಪಠ್ಯದ ಪಾಠ ಪೂರ್ಣಗೊಂಡಿದೆ. ಸ್ನಾತಕೋತ್ತರ ಪದವಿಯಲ್ಲಿ ಶೇ.55 ರಿಂದ 65 ರಷ್ಟು ಪಠ್ಯಕ್ರಮ ಲಾಕ್‍ಡೌನ್‍ಗಿಂತ ಮುನ್ನ ಮುಗಿದಿತ್ತು. ಈಗ ಶೇ 85ರಿಂದ 90 ಪಠ್ಯಕ್ರಮ ಮುಗಿದಿದ್ದು, ಉಳಿದದ್ದನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಅದಾಗ್ಯೂ ತಾಂತ್ರಿಕ ಕಾರಣದಿಂದ ಪಾಠಕ್ಕೆ ಹಾಜರಾಗಲು ಸಾಧ್ಯವಾಗದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಂತೆ ಪುನರಾವರ್ತನೆ ಮಾಡಲಾಗುವುದು ಎಂದು ತಿಳಿಸಿದರು.