ದಾವಣಗೆರೆ: ಆಗಸ್ಟ್ 7 ರಂದು ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಎಸ್ಪಿ ಹನುಮಂತರಾಯ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ವಾರದ ಹಿಂದೆ ರ್ಯಾಪಿಡ್ ಟೆಸ್ಟ್ ಮಾಡಿಸಿದಾಗ ಇವರಿಗೆ ಸೋಂಕು ತಗುಲಿದ್ದು ಖಾತ್ರಿಯಾಗಿತ್ತು. ನಂತರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು ಹೋಂ ಕ್ವಾರಂಟೈನ್ನಲ್ಲಿ ಇರಲಿದ್ದಾರೆ.
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, 'ಒಂದು ವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಈಗ ನನ್ನಲ್ಲಿ ಸೋಂಕಿನ ಲಕ್ಷಣಗಳಿಲ್ಲ. ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದ ಕಾರಣ ಬಿಡುಗಡೆಗೊಂಡಿದ್ದೇನೆ' ಎಂದರು.
ಕೋವಿಡ್ನಿಂದ ಗುಣಮುಖರಾದ ಎಸ್ಪಿ ಹನುಮಂತರಾಯ ಮಾಧ್ಯಮದವರೊಂದಿಗೆ ಮಾತನಾಡಿದರು. ಇದೇ ಸಂದರ್ಭ, ಆಸ್ಪತ್ರೆಯ ಸರ್ಜನ್, ಡಿಹೆಚ್ಒ, ಸರ್ವೇಕ್ಷಣಾ ಇಲಾಖಾಧಿಕಾರಿಗಳು, ವೈದ್ಯರು, ನರ್ಸ್ ಸೇರಿದಂತೆ ಸಿಬ್ಬಂದಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೋಂಕಿತ ಪ್ರಕರಣಗಳು ಹೆಚ್ಚಾದರೂ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಯೊಬ್ಬರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿದರೆ ರೋಗ ತಡೆಗಟ್ಟಬಹುದು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಜೊತೆಗೆ ಶುಚಿತ್ವವನ್ನು ಕಾಪಾಡಿಕೊಳ್ಳಿ ಎಂದರು.