ದಾವಣಗೆರೆ:ಅದು ಸ್ವಾತಂತ್ರ್ಯ ಪೂರ್ವದ ಸರ್ಕಾರಿ ಶಾಲೆ, ಅ ಶಾಲೆ ನಿರ್ಮಾಣ ಆಗಿ ಬರೋಬ್ಬರಿ 80 ವರ್ಷಗಳೇ ಉರುಳಿವೆ. ಆದರೆ ಇಷ್ಟು ಹಳೆಯದಾದ ಶಾಲೆ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಮಕ್ಕಳು ಪಾಠ ಕೇಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು, ಕೆಲ ಪೋಷಕರು ಶಾಲೆಯ ದುಸ್ಥಿತಿ ನೋಡಿ ತಮ್ಮ ಮಕ್ಕಳನ್ನು ಈ ಶಾಲೆಗೆ ಕಳಿಸದೇ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಆದ್ರೆ ಬಡ ಮಕ್ಕಳು ಮಾತ್ರ ಜೀವ ಕೈಯಲ್ಲಿ ಹಿಡಿದು ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಸರ್ಕಾರಿ ಶಾಲೆಗಳನ್ನು ಉಳಿಸಿ ಎಂದು ದೊಡ್ಡದಾಗಿ ಬಡಾಯಿ ಕೊಚ್ಚಿಕೊಳ್ಳುವ ಹೋರಾಟಗಾರರು ಶೋಚನೀಯ ಸ್ಥಿತಿಗೆ ತಲುಪಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದಲ್ಲಿರುವ ಸ್ವಾತಂತ್ರ್ಯ ಪೂರ್ವದಲ್ಲಿ ತಲೆ ಎತ್ತಿದ ಶಾಲೆಯತ್ತ ಮಾತ್ರ ಗಮನಿಸುತ್ತಿಲ್ಲ. ಶಾಲಾ ದಾಖಲೆಗಳ ಪ್ರಕಾರ ಈ ಸಂಗಾಹಳ್ಳಿಯಲ್ಲಿರುವ ಏಕೈಕ ಸರ್ಕಾರಿ ಶಾಲೆ 1940-41 ರಲ್ಲಿ ನಿರ್ಮಾಣ ಮಾಡಲಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭಗೊಂಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಕಲ್ಪ ಒದಗಿಸಬೇಕಾಗಿದೆ.
ದಾಖಲಾತಿಯಲ್ಲಿ ಇಳಿಕೆ.. ಬಡ ಮಕ್ಕಳ ಪಾಲಿಗೆ ಅಕ್ಷರ ಕಲಿಯಲು ಆಸರೆಯಾಗಿರುವ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಸಂಪೂರ್ಣ ಕುಸಿಯುವ ಹಂತದಲ್ಲಿದೆ. ಇಂತಹ ಶೋಚನೀಯ ಸ್ಥಿತಿ ತಲುಪಿರುವ ಕಟ್ಟಡದಲ್ಲಿ 48 ಬಡ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದರೆ ಶಾಲೆಯ ಪರಿಸ್ಥಿತಿ ಗಮನಿಸಿದ ಪೋಷಕರು ಬೇರೆ ಶಾಲೆಗಳತ್ತ ಮುಖ ಮಾಡಿದ್ದು, ದಾಖಲಾತಿಯಲ್ಲಿ ಗಣನೀಯ ಇಳಿಕೆ ಕಂಡಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಹಾಲೇಶ್ ತಿಳಿಸಿದರು.