ದಾವಣಗೆರೆ :ಬೆಣ್ಣೆನಗರಿಯನ್ನು ಸಾರ್ಟ್ ಸಿಟಿ ಎಂದು ಘೋಷಣೆಮಾಡಿ ವರ್ಷಗಳೇ ಉರುಳಿತು. ಆದರೆ ಹಳೆ ಪೇಟೆ ಮತ್ತು ಹೊಸ ಪೇಟೆ ನಡುವೆ ಇರುವ ನಗರದ ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ನ ಸಮಸ್ಯೆ ಪರಿಹಾರವಾಗಿರಲಿಲ್ಲ. ಈ ಸಮಸ್ಯೆ ದಶಕಗಳಿಂದ ಇದ್ದು ಇದಕ್ಕೆ ಸದ್ಯ ಶಾಶ್ವತ ಪರಿಹಾರ ಮಾಡುವ ಯೋಜನೆ ರೂಪಿಸಲಾಗುತ್ತಿದೆ.
ಹೊಸ ದಾವಣಗೆರೆಗೆ ಮತ್ತು ಹೆಳೆದರ ನಡುವೆ ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ ಇದೆ. ದಿನಕ್ಕೆ ಕಮ್ಮಿ ಎಂದರೂ 40 ರೈಲುಗಳು ಬಂದು ಹೋಗುವುದರಿಂದ ಅರ್ಧ ಗಂಟೆಗೊಮ್ಮೆ ಗೇಟ್ ಬಂದ್ ಮಾಡಬೇಕಾದ ಕಾರಣ ಸಂಚಾರ ದಟ್ಟಣೆ ಉಂಟಾಗುತ್ತದೆ. ಅಲ್ಲದೇ ತುರ್ತಾಗಿ ಹೋಗಬೇಕಾದ ಆ್ಯಂಬುಲೆನ್ಸ್, ಶಾಲಾ ವಾಹನಗಳಿಗೂ ಸಮಸ್ಯೆ ಆಗುತ್ತಿದೆ.
ಈ ರೈಲೆ ಹಳಿಯ ಸಮಸ್ಯೆಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಆದಿಯಾಗಿ ಹೋರಾಟ ನಡೆಸಿ, ಜಿಲ್ಲಾಡಳಿತಕ್ಕೆ ಪತ್ರ ಸಹ ಬರೆದಿದ್ದರು. ರೈಲ್ವೆ ಇಲಾಖೆ ಸಚಿವರಾಗಿದ್ದ ಕೆ ಎಚ್ ಮುನಿಯಪ್ಪ, ಬಸನಗೌಡ ಪಾಟೀಲ ಯತ್ನಾಳ್, ಸುರೇಶ್ ಅಂಗಡಿ ಖುದ್ದು ಅಶೋಕ ರೈಲ್ವೆ ಗೇಟ್‌ಗೆ ಭೇಟಿ ನೀಡಿ ಸಮಸ್ಯೆ ಅವಲೋಕಿಸಿದ್ದರು. ಹಾಗೇ ಭರವಸೆಯನ್ನು ನೀಡಿದ್ದರು. ಆದರೆ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ.
ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಮಾಸ್ಟರ್ ಪ್ಲಾನ್ ರೂಪಿಸಿದ್ದರು. ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನಿಂದ ರೈಲ್ವೆ ಇಲಾಖೆಗೆ 22 ಲಕ್ಷ ರೂ. ಅನುದಾನ ನೀಡಲಾಗಿತ್ತು. ಕೇಂದ್ರದಲ್ಲಿ ರೈಲ್ವೆ ಇಲಾಖೆ ಸಚಿವರಾಗಿದ್ದ ಡಿ ವಿ ಸದಾನಂದಗೌಡ ಅವರು ಬಜೆಟ್‌ನಲ್ಲಿ 35 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಅದರೂ ಕೂಡ ಕಾಮಾಗಾರಿಗೆ ಮುಹೂರ್ತ ಕೂಡಿಬಂದಿರಲಿಲ್ಲ.