ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಕರ್ನಾಟಕ ರಾಜ್ಯ ಕೇಂದ್ರ ಬಿಂದು. ದಾವಣಗೆರೆ ಮಾರ್ಗ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಣೆ ಮಾಡಿದ್ದ ನೂತನ ರೈಲು ಮಾರ್ಗಗಳು ನನೆಗುದ್ದಿಗೆ ಬಿದ್ದಿದೆ.
ದಾವಣಗೆರೆ, ಚಿತ್ರದುರ್ಗ, ತುಮಕೂರು ನೇರ ರೈಲು ಮಾರ್ಗ ಘೋಷಣೆಯಾಗಿ ವರ್ಷಗಳೇ ಉರುಳಿದರೂ, ನೇರ ಮಾರ್ಗ ನಿರ್ಮಾಣ ಮಾಡಲು ರೈತರು ಭೂಮಿ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ದಾವಣಗೆರೆಯ ಭಾಗಶಃ ರೈತರು ತಮ್ಮ ಭೂಮಿಯನ್ನು ನೇರ ರೈಲು ಮಾರ್ಗ ನಿರ್ಮಾಣ ಮಾಡಲು ಬಿಟ್ಟುಕೊಟ್ಟಿದ್ದಾರೆ. ಆದರೆ, ಚಿತ್ರದುರ್ಗ ಹಾಗೂ ತುಮಕೂರು ಭಾಗದಲ್ಲಿ ರೈತರು ತಮ್ಮ ಜಮೀನು ಬಿಟ್ಟುಕೊಡದೇ ಇರಲು ನಿರ್ಧಾರ ಮಾಡಿದ್ದು, ಜಿಲ್ಲಾಡಳಿತ ಹಾಗೂ ರೈತರ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ. ಇನ್ನು ನೇರ ರೈಲು ಮಾರ್ಗ 2010ರಲ್ಲಿ ಘೋಷಣೆಯಾಗಿದ್ದು, ಇದರ ಕಾಮಗಾರಿ ವೆಚ್ಚವನ್ನು ಹಂತ ಹಂತವಾಗಿ ಕೇಂದ್ರ - ರಾಜ್ಯ ಸರ್ಕಾರಗಳೆರಡು ಭರಿಸಲಿವೆ. ಇನ್ನು ಆರಂಭದಲ್ಲಿ ಈ ನೇರ ರೈಲು ಮಾರ್ಗಕ್ಕೆ 2010ರಲ್ಲಿ 9 ರಿಂದ 12 ಕೋಟಿ ಅನುದಾನ ನೀಡಲಾಗಿತ್ತು. ಬಳಿಕ ಹಂತ ಹಂತವಾಗಿ ಈ ಕಾಮಗಾರಿಗೆ ಅನುದಾನ ದೊರೆತು, ಯೋಜನೆ ಘೋಷಣೆಯಾಗಿ ಹತ್ತು ವರ್ಷಗಳೇ ಕಳೆದಿದೆ.