ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಮತ್ತೊಮ್ಮೆ ಏರುವುದು ಬಹುತೇಕ ಖಚಿತ. 22 ಸ್ಥಾನಗಳಲ್ಲಿ ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕೈಪಡೆ ಎರಡನೇ ಬಾರಿ ಅಧಿಕಾರಕ್ಕೇರಲಿದೆ. ಇದಕ್ಕೆ ಕಾರಣ 45 ನೇ ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದಿದ್ದ ಉದಯ್ ಕುಮಾರ್ ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿರುವುದರಿಂದ ಬಹುಮತ ಸಾಬೀತಿಗೆ ಇದ್ದ ತಡೆ ನಿವಾರಣೆಯಾದಂತಾಗಿದೆ.
ಪಕ್ಷೇತರ ಅಭ್ಯರ್ಥಿ "ಕೈ' ಹಿಡಿದರಿಂದಾಗಿ 23 ಸ್ಥಾನಕ್ಕೇರಿದ ಬಲ: ಪಾಲಿಕೆಯಲ್ಲಿ ಈ ಬಾರಿಯೂ ಕಾಂಗ್ರೆಸ್ ನದ್ದೇ ಅಧಿಕಾರ...? ಪಕ್ಷೇತರ ಅಭ್ಯರ್ಥಿ ಬೆಂಬಲದೊಂದಿಗೆ 23 ಸ್ಥಾನಕ್ಕೇರಿರುವ ಕಾಂಗ್ರೆಸ್ ಮೀಸಲಾತಿ ಘೋಷಣೆಯಾದ ಬಳಿಕ ಅಧಿಕಾರದ ಗದ್ದುಗೆಗೆ ಏರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ಸಾಮಾನ್ಯ ಮೀಸಲಾತಿ ಮೇಯರ್ ಸ್ಥಾನಕ್ಕಿದ್ದು, ಇದನ್ನು ಬದಲಾವಣೆ ಮಾಡಲು ಬಿಜೆಪಿ ನಾಯಕರು ಸರ್ಕಾರದ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಪಕ್ಷೇತರರು, ಜೆಡಿಎಸ್ ಅಭ್ಯರ್ಥಿ ಬೆಂಬಲ ಪಡೆಯಲು ಹರಸಾಹಸ ಮಾಡುತ್ತಿರುವ ಕಮಲ ಪಡೆ, ಅಧಿಕಾರಕ್ಕೇರುವ ಕಸರತ್ತನ್ನು ಮಾತ್ರ ನಿಲ್ಲಿಸಿಲ್ಲ.
ಇನ್ನು, ಕಾಂಗ್ರೆಸ್ ನಾಯಕರು ಈಗಾಗಲೇ ಜೆಡಿಎಸ್ ಅಭ್ಯರ್ಥಿಯನ್ನು ಮನವೊಲಿಸುವ ಕೆಲಸ ಮುಂದುವರಿಸಿದೆ. ಜೆಡಿಎಸ್ ನಮಗೆ ಬೆಂಬಲಿಸಲಿದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆಯಾದರೂ, ಹೈಜಾಕ್ ಮಾಡಲು ಬಿಜೆಪಿ ತಂತ್ರ ರೂಪಿಸಿದೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಜೆಡಿಎಸ್ ನಿಂದ ಗೆದ್ದಿರುವ ನೂರ್ ಜಹಾನ್ ಯಾರನ್ನು ಬೆಂಬಲಿಸುತ್ತಾರೆ ಎಂಬ ಕುತೂಹಲವೂ ಹೆಚ್ಚಿದೆ.
ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್. ಎ. ರವೀಂದ್ರನಾಥ್, ಸಂಸದ ಜಿ. ಎಂ. ಸಿದ್ದೇಶ್ವರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಪಾಲಿಕೆಯಲ್ಲಿ ಅಧಿಕಾರಕ್ಕೇರುವ ಭರವಸೆಯನ್ನು ಇನ್ನೂ ಕಳೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ. ಇನ್ನು 23 ಸ್ಥಾನದ ಜೊತೆಗೆ ಜೆಡಿಎಸ್ ಸದಸ್ಯರೊಟ್ಟಿಗೆ ಸೇರಿ ಅಧಿಕಾರದ ಗದ್ದುಗೆಗೆ ಏರಲು ಸಿದ್ಧತೆ ಮಾಡಿಕೊಂಡಿರುವ ಕಾಂಗ್ರೆಸ್ ಮೇಯರ್ ಆಗಿ ಯಾರನ್ನು ಮಾಡಬೇಕೆಂಬ ಚರ್ಚೆಯಲ್ಲಿ ತೊಡಗಿದೆ.
ಕಳೆದ ಬಾರಿ ಕ್ಲೀನ್ ಸ್ವೀಪ್ ಮಾಡಿದ್ದ ಕಾಂಗ್ರೆಸ್ 39 ಸ್ಥಾನಗಳನ್ನು ಹೊಂದಿತ್ತು. ಬಿಜೆಪಿ ಕೇವಲ ಒಂದು ಸ್ಥಾನದಲ್ಲಿ ಗೆದ್ದು ಹೀನಾಯವಾಗಿ ಸೋತಿತ್ತು. ಈ ಬಾರಿ 17 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ಮತ್ತೆ ಅಧಿಕಾರಕ್ಕೇರಿದರೆ ಆಶ್ಚರ್ಯವೇ ಸರಿ ಎಂಬುದು ರಾಜಕೀಯ ಪಂಡಿತರ ಅಭಿಮತವಾಗಿದೆ.