ದಾವಣಗೆರೆ:ರಾಜ್ಯದಲ್ಲಿ ನೂತನ ಸಿಎಂ ಬದಲಾವಣೆ ಮಾಡಿದ ಬೆನ್ನಲ್ಲೇ ಜಿಲ್ಲೆಯ ಶಾಸಕರಲ್ಲಿ ಸಚಿವ ಸ್ಥಾನಕ್ಕೆ ಲಾಬಿ ಮುಂದುವರೆದಿದೆ. ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೂತನ ಸಿಎಂ ಮನೆಯಲ್ಲಿ ಶಾಸಕರು ಠಿಕಾಣಿ ಹೂಡಿದ್ದಾರೆ.
ಈ ಹಿಂದೆ ಇದ್ದ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜಿಲ್ಲೆಗೆ ಸರಿಯಾಗಿ ಬಾರದೆ ಇದ್ದಿದ್ದರಿಂದ ಕೆಲ ಶಾಸಕರು ಬೇಸತ್ತಿದ್ದರು. ದಾವಣಗೆರೆ ಜಿಲ್ಲೆಯ ಐದು ವಿಧಾನ ಸಭಾಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿರುವ ಐವರು ಶಾಸಕರಲ್ಲಿ ಸಚಿವ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ಸಚಿವ ಸ್ಥಾನವನ್ನು ಗಿಟ್ಟಿಸಿಕೊಳ್ಳಲೇಬೇಕೆಂದು ಸಿಎಂ ಮನೆಯಲ್ಲಿ ಠಿಕಾಣಿ ಹೂಡಿರುವ ಶಾಸಕರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ರವೀಂದ್ರನಾಥ್ ಸೇರಿದಂತೆ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ನಡುವೆ ಸಚಿವ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಇನ್ನು ಎಸ್ಟಿ ಕೋಟದಲ್ಲಿ ಜಗಳೂರು ಶಾಸಕ ಎಸ್ ವಿ ರಾಮಚಂದ್ರಪ್ಪ ಸಚಿವ ಸ್ಥಾನ ಸಿಗುತ್ತೆ ಎಂದು ಕಾದು ಕೂತಿದ್ದಾರೆ.