ದಾವಣಗೆರೆ :ನಗರದಕೆಟಿಜೆ ನಗರವನ್ನು ಹೊಸ ಕಂಟೈನ್‍ಮೆಂಟ್ ಝೋನ್ ಆಗಿ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ದಾವಣಗೆರೆಯ ಕೆಟಿಜೆ ನಗರ ಹೊಸ ಕಂಟೈನ್‍ಮೆಂಟ್ ಝೋನ್ : ಡಿಸಿ ಮಾಹಿತಿ - Davanagere KTJ Nagar New containment zone
ಪಿ.665 ಕೆಟಿಜೆ ನಗರದ ನಿವಾಸಿಯಾಗಿರುವುದರಿಂದ ಆ ಪ್ರದೇಶವನ್ನು ಹೊಸ ಕಂಟೈನ್‍ಮೆಂಟ್ ಝೋನ್ ಆಗಿ ಗುರುತಿಸಲಾಗಿದೆ ಎಂದು ದಾವಣಗೆರೆ ಡಿಸಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ರೋಗಿ ಸಂಖ್ಯೆ 665 ಕೆಟಿಜೆ ನಗರದವರಾದ ಕಾರಣ ಈ ರೋಗಿಯ ಮನೆಯನ್ನು ಎಪಿ ಸೆಂಟರ್ ಎಂದು ಗುರುತಿಸಲಾಗಿದೆ. ಈ ಎಪಿಸೆಂಟರ್ನ 100 ಮೀಟರ್ ವ್ಯಾಪ್ತಿಯನ್ನು ಕಂಟೈನ್‍ಮೆಂಟ್ ಝೋನ್ ಆಗಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಕಂಟೈನ್‍ಮೆಂಟ್ ಝೋನ್ಗಳಲ್ಲಿ ಸಕ್ರಿಯವಾಗಿ ಸರ್ವೇಕ್ಷಣಾ ಕೆಲಸ ಜಾರಿಯಲ್ಲಿದೆ. ನಗರದಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಪೆಟ್ರೋಲ್ ಬಂಕ್ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಮಧ್ಯಾಹ್ನ 1 ಗಂಟೆಯೊಳಗೆ ಬಂದ್ ಮಾಡಲಾಗುತ್ತಿದೆ. ಕಂಟೈನ್‍ಮೆಂಟ್ ಝೋನ್‍ನಲ್ಲಿ ಯಾರಿಗಾದರೂ ಕೆಮ್ಮು, ಶೀತ ಜ್ವರದಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಜಿಲ್ಲಾಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ತಾವೇ ಮಾತ್ರೆ ತೆಗೆದುಕೊಂಡು ನಗರಕ್ಕೆ ಮಾರಕವಾಗದಿರಿ ಎಂದು ಎಚ್ಚರಿಸಿದರು.
ಕಂಟೈನ್‍ಮೆಂಟ್ ಝೋನ್‍ನಲ್ಲಿ ವ್ಯಾಪಕ ಆರೋಗ್ಯ ಸರ್ವೇ : ಕಂಟೈನ್‍ಮೆಂಟ್ ಝೋನ್ನ ಎಲ್ಲಾ ಮನೆಗಳಿಗೆ ತೆರಳಿ ವ್ಯಾಪಕ ಆರೋಗ್ಯ ಸರ್ವೇ ಕಾರ್ಯ ನಡೆಸಲಾಗುವುದು. ಸರ್ವೇ ಮಾಡಲು ತೆರಳುವ ಇನ್ಸಿಡೆಂಟ್ ಕಮಾಂಡರ್ ಸೇರಿದಂತೆ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರಿಗೆ ರಕ್ಷಣಾ ದೃಷ್ಟಿಯಿಂದ ಪಿಪಿಇ ಕಿಟ್‍ಗಳನ್ನು ನೀಡಲಾಗುವುದು. ಈ ರಕ್ಷಣಾ ಸಾಮಗ್ರಿಗಳೊಂದಿಗೆ ಆರೋಗ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಕಂಟೈನ್‍ಮೆಂಟ್ ಝೋನ್‍ನಲ್ಲಿ ಯಾರೂ ಕೂಡ ಮನೆಯಿಂದ ಹೊರಬರಬಾರದು. ಹೊರಗಡೆ ಬಂದರೂ ಏನನ್ನೂ ಮುಟ್ಟಬಾರದು. ಈ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು. ಈ ಝೋನ್ಗಳಿಗೆ ಅಗತ್ಯ ಆಹಾರ, ತರಕಾರಿ ಇತ್ಯಾದಿಗಳನ್ನು ತಲುಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.