ದಾವಣಗೆರೆ:ಆ ಶಾಲೆ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾಗಿದೆ. ಶಾಲೆಯಲ್ಲಿ ವ್ಯಾಸಂಗ ಮಾಡಿದವರು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದವರಿದ್ದಾರೆ. ಇದಲ್ಲದೇ ಅದೇ ವಿದ್ಯಾ ದೇಗುಲದಲ್ಲಿ ದಿವಂಗತ ಮಾಜಿ ಸಿಎಂ ಎಸ್ ನಿಜಲಿಂಗಪ್ಪ ಅವರು ಓದಿದ ಶಾಲೆ ಕೂಡ ಹೌದು. ಆದರೆ ಅ ಶಾಲೆ ಇದೀಗ ಅವನಿಯತ್ತ ಸಾಗಿದೆ. ಶತಮಾನ ಪೂರೈಸಿದ ಹಳೇ ಶಾಲೆ ಇಂದು ಪಾಳುಕೊಂಪೆಯಾಗಿದ್ದು, ಸೂಕ್ತ ವ್ಯವಸ್ಥೆ ಇಲ್ಲದೇ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ದಾವಣಗೆರೆ ನಗರದ ಕೆ.ಆರ್.ಮಾರ್ಕೆಟ್ನ ಹೃದಯಭಾಗದಲ್ಲಿರುವ ಸರ್ಕಾರಿ ಶಾಲೆ ಈಗಲೋ, ಆಗಲೋ ಬೀಳೋ ಹಂತವನ್ನು ತಲುಪಿದೆ. ಈ ವಿದ್ಯಾದೇಗುಲ 1900 ರಲ್ಲಿ ನಿರ್ಮಾಣ ಆಗಿ ಸಾಕಷ್ಟು ಪ್ರತಿಭಾವಂತರಿಗೆ ವಿದ್ಯಾದಾನ ಮಾಡಿದೆ. ಏಕೀಕೃತ ರಾಜ್ಯದ ಮೊದಲ ಮುಖ್ಯಮಂತ್ರಿ ದಿವಂಗತ ಎಸ್ ನಿಜಲಿಂಗಪ್ಪನಂತಹ ಮಹಾನ್ ನಾಯಕ ಓದಿದ್ದು ಇದೇ ಶಾಲೆಯಲ್ಲಿ. ಇದಲ್ಲದೇ ಈ ಬಹಳ ಹಳೇಯ ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿಗಳು ಪ್ರಧಾನಿ ಕಾರ್ಯಾಲಯ ಸೇರಿದಂತೆ ದೇಶ ವಿದೇಶಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ.
ದಶಕ ಪೂರೈಸಿದ ಶಾಲೆಗೆ ಕಾಯಕಲ್ಪ ಬೇಕಾಗಿದ್ದು, ಅಭಿವೃದ್ಧಿ ಪಡಿಸುವಲ್ಲಿ ರಾಜ್ಯ ಸರ್ಕಾರ, ದಾವಣಗೆರೆ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಶಾಲೆಯಲ್ಲಿ ಓದಿದ ಹಳೇಯ ವಿದ್ಯಾರ್ಥಿಗಳ ಆರೋಪ ಮಾಡಿದ್ದಾರೆ. ಬೀಳುವ ಹಂತ ತಲುಪಿರುವ ಅತ್ಯಂತ ಹಳೇಯ ಈ ಶಾಲೆಯ ದುಃಸ್ಥಿತಿಯನ್ನು ಕಂಡು ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸುತ್ತಿಲ್ಲ. ಒಂದು ಕಾಲದಲ್ಲಿ ನೂರಾರು ಮಕ್ಕಳು ಈ ಶಾಲೆಗೆ ದಾಖಲಾಗುತ್ತಿದ್ದರು. ಆದರೆ, ಈ ವರ್ಷ ಕೇವಲ 50 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ.
ಹಳೆ ವಿದ್ಯಾರ್ಥಿಗಳ ಮನವಿ:ಇದೇ ವೇಳೆ ಪ್ರತಿಕ್ರಿಯಿಸಿದ ಶಾಲೆಯ ಹಳೇ ವಿದ್ಯಾರ್ಥಿ ಶಾಂತಕುಮಾರ್, ಈ ಶಾಲೆಯಲ್ಲಿ ದಿವಂಗತ ಮಾಜಿ ಸಿಎಂ ಎಸ್ ನಿಜಲಿಂಗಪ್ಪ ಅವರು ವ್ಯಾಸಂಗ ಮಾಡಿದ್ದಾರೆ. ಅದಲ್ಲದೇ ಇಲ್ಲಿ ವ್ಯಾಸಂಗ ಮಾಡಿದ ಸಾಕಷ್ಟು ಜನ ದೇಶ ವಿದೇಶದ ದೊಡ್ಡ ಹುದ್ದೆಯಲ್ಲಿ ಕೆಲಸ ನಿರ್ವಹಸುತ್ತಿದ್ದಾರೆ. ಆದರೆ, ಶಾಲೆಯ ಸ್ಥಿತಿ ಶೋಚನೀಯವಾಗಿದೆ. ಮಕ್ಕಳ ದಾಖಲಾತಿಯಲ್ಲಿ ಕುಸಿತ ಕಂಡಿದೆ. ಹೀಗೆ ಮುಂದುವರಿದರೆ ಶಾಲೆ ಖಾಯಂ ಆಗಿ ಬಾಗಿಲು ಹಾಕಬೇಕಾಗತ್ತೆ. ತಕ್ಷಣ ಈ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.