ದಾವಣಗೆರೆ:ಈಕೆ ಆರು ವರ್ಷದ ಪುಟ್ಟ ಪೋರಿ. ಈಕೆಯ ತಂದೆ ಆರ್ಯುವೇದಿಕ್ ವೈದ್ಯರಾಗಿದ್ದು, ಈ ಪುಟ್ಟ ಬಾಲಕಿ 26 ತರಹೇವಾರಿ ರೋಗಗಳಿಗೆ ಆಯುರ್ವೇದ ಪದ್ಧತಿಯಲ್ಲಿ ಯಾವ ರೀತಿಯ ಔಷಧ ನೀಡ್ಬೇಕು ಎಂದು ಅರಳು ಹುರಿದಂತೆ ಪಟ ಪಟಾ ಅಂತ ಹೇಳ್ತಾಳೆ. ಒಮ್ಮೆ ಕೇಳಿಕೊಟ್ಟ ಔಷಧದ ಬಗ್ಗೆ ತಿಳಿದುಕೊಳ್ಳುವ ಈ ಪೋರಿ, ಅದನ್ನೇ ನೆನಪಿನಲ್ಲಿಟ್ಟುಕೊಂಡು ಪುನರಾವರ್ತಿಸುವ ಅದ್ಭುತ ಜಾಣ್ಮೆ ಇದೆ. ಈ ಚಿಕ್ಕ ಪ್ರತಿಭೆ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರಿದ್ದಾಳೆ.
ಹೌದು, ಜಿಲ್ಲೆಯ ಜಗಳೂರು ಪಟ್ಟಣದ ನಿವಾಸಿ ಡಾ. ಚೇತನ್ ಹಾಗೂ ವಸುಧಾ ದಂಪತಿಯ ಏಕೈಕ ಪುತ್ರಿ ತನಸ್ವಿ ಸುಜಾ ಒಟ್ಟು 26 ರೋಗಗಳಿಗೆ ಆಯುರ್ವೇದ ಔಷಧೋಪಚಾರವನ್ನು ನೆನಪಿನಲ್ಲಿಟ್ಟುಕೊಳ್ಳುವ ಅದ್ಭುತ ಜ್ಞಾಪಕ ಶಕ್ತಿ ಹೊಂದಿದ್ದಾಳೆ. ಗ್ಯಾಸ್ಟ್ರಿಕ್, ಮೂಲವ್ಯಾದಿ, ಹೃದಯರೋಗ, ರಕ್ತದೊತ್ತಡ, ಗರ್ಭಾಶಯದಲ್ಲಿ ಗಡ್ಡೆ, ಮೂಗಲ್ಲಿ ದುರ್ಮಾಂಸ, ಕೊರೊನಾ, ಕೀಲು ನೋವು, ವೆರಿಕೋಸ್ ವೇನ್ಸ್, ಮಧುಮೇಹ, ಡೆಂಗ್ಯೂ, ಥೈರಾಯ್ಡ್, ಪಾರ್ಕಿನ್ಸನ್ಸ್, ಸರ್ಪಹುಣ್ಣು, ಪಿತ್ತಕೋಶದಲ್ಲಿ ಕಲ್ಲು, ಇಸುಬು, ಮೂತ್ರ ಕೋಶದಲ್ಲಿ ಕಲ್ಲು ಮೊದಲಾದ ರೋಗಗಳಿಗೆ ಆರ್ಯುವೇದಿಕ್ ಪದ್ಧತಿಯಲ್ಲಿ ಔಷಧ ನೀಡುವ ಬಗ್ಗೆ ಅರಿತಿದ್ದಾಳೆ.
ಆರು ವರ್ಷದ ಈ ಬಾಲಕಿಗೆ ಅದ್ಭುತವಾದ ಜ್ಞಾಪಕಶಕ್ತಿ ಹೊಂದಿದ್ದನ್ನು ಕಂಡ ಆರ್ಯುವೇದಿಕ್ ವೈದ್ಯರಾಗಿರುವ ಡಾ. ಚೇತನ್ ದಂಪತಿ ನಿಬ್ಬೆರಗಾಗಿದ್ದಾರೆ. ಹಾಡು, ಡ್ರಾಯಿಂಗ್ ಸೇರಿದ್ದಂತೆ ಔಷಧಿಗಳ ಬಗ್ಗೆ ಒಮ್ಮೆ ಹೇಳಿದ್ರೆ ಸಾಕು, ತನಸ್ವಿ ಸುಜಾ ಜ್ಞಾಪಕದಲ್ಲಿಷ್ಟುಕೊಂಡು ರಿಪೀಟ್ ಮಾಡ್ತಾಳೆ. ಪ್ರಿಸ್ಕ್ರಿಪ್ಷನ್ ಕೇಳುತ್ತಾ ಬೆಳೆದ ತನಸ್ವಿಗೆ ಎಲ್ಲವೂ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇನ್ನೂ ಆರು ವರ್ಷ ಪೂರೈಸದ ತನಸ್ವಿ, 26 ವಿವಿಧ ರೋಗಗಳಿಗೆ ಆಯುರ್ವೇದಿಕ್ ಔಷಧೋಪಚಾರವನ್ನು ಪಟಪಟಾ ಅಂತಾ ಹೇಳುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.