ದಾವಣಗೆರೆ: ಮಹಾಮಾರಿ ಕೊರೊನಾಕ್ಕೆ ಬಲಿಯಾಗುತ್ತಿರುವುದು ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸೋಂಕಿನ ಹಾಟ್ ಸ್ಪಾಟ್ ನಗರಗಳಲ್ಲಿ ಬೆಣ್ಣೆನಗರಿಯೂ ಒಂದು. ಕಳೆದ ಒಂದು ತಿಂಗಳಿನಿಂದ ಸೋಂಕಿತರು ಹಾಗೂ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. 30 ದಿನಗಳ ಹಿಂದೆ 2.93 ಡೆತ್ ರೇಟ್ ಇತ್ತು. ಆದ್ರೆ, ಈಗ ಕಡಿಮೆಯಾಗುತ್ತಿದ್ದು, ಹದಿನೈದು ದಿನಗಳಿಗೆ ಹೋಲಿಸಿದ್ರೆ 1.2ರಷ್ಟಾಗಿದೆ. ಇದನ್ನು ಶೇಕಡಾ 1ಕ್ಕಿಂತ ಕಡಿಮೆಗೊಳಿಸುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ.
ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ. ಜಿಲ್ಲೆಯಲ್ಲಿ 1,10,576 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 75 ಸಾವಿರ ಆಂಟಿಪಿಸಿಆರ್, 35 ಸಾವಿರದದಷ್ಟು ರ್ಯಾಪಿಡ್ ಟೆಸ್ಟ್ ಮಾಡಲಾಗಿದೆ. 11,882 ಪಾಸಿಟಿವ್ ಕೇಸ್ ಪತ್ತೆ ಆಗಿದ್ದರೆ, 9 ಸಾವಿರ ಮಂದಿ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2,855 ಸಕ್ರಿಯ ಪ್ರಕರಣಗಳಿವೆ. 220 ಮಂದಿ ಕೊರೊನಾಕ್ಕೆ ಬಲಿಯಾಗಿದ್ದರೆ, ದಾವಣಗೆರೆ ಜಿಲ್ಲೆಯಲ್ಲಿ 203 ಹಾಗೂ ಇತರೆ ಜಿಲ್ಲೆಗಳಿಂದ ಬಂದಿದ್ದ 13 ಮಂದಿ ಮೃತಪಟ್ಟಿದ್ದಾರೆ.
ವೆಂಟಿಲೇಟರ್ ಕೊರತೆ ಇಲ್ಲ: ಡಿಸಿ ಸ್ಪಷ್ಟನೆ
ಜಿಲ್ಲೆಯಲ್ಲಿ ವೆಂಟಿಲೇಟರ್ಗಳ ಕೊರತೆ ಇದೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ಆದ್ರೆ, ಯಾವುದೇ ಸಮಸ್ಯೆ ಆಗಿಲ್ಲ. ಒಟ್ಟು 31 ವೆಂಟಿಲೇಟರ್ಗಳಿವೆ. ಚಿಗಟೇರಿ ಜಿಲ್ಲಾಸ್ಪತ್ರೆ, ಎಸ್.ಎಸ್.ಹೈಟೆಕ್ ಆಸ್ಪತ್ರೆ, ಸಿಟಿ ಸೆಂಟ್ರಲ್ ಹಾಗೂ ಬಾಪೂಜಿ ಆಸ್ಪತ್ರೆಯಲ್ಲಿದ್ದು, ಗಂಭೀರವಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್.ಎಸ್.ಎನ್ 39 ಯಂತ್ರಗಳಿವೆ. ಅದೇ ರೀತಿಯಲ್ಲಿ 413 ಆಕ್ಸಿಜನ್ ಬೆಡ್ಗಳಿವೆ. ಇನ್ನು 21 ವೆಂಟಿಲೇಟರ್ಗಳು ಹೆಚ್ಚಿದೆ. ಆದ್ರೆ ತಜ್ಞ ವೈದ್ಯರು, ಸಿಬ್ಬಂದಿ ಕೊರತೆ ಇರುವ ಕಾರಣದಿಂದ ಬಳಸುತ್ತಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದ್ದು, ಆದಷ್ಟು ಬೇಗ ವೈದ್ಯರು ಹಾಗೂ ಸಿಬ್ಬಂದಿ ಸಿಕ್ಕ ತಕ್ಷಣ ಕಾರ್ಯಾಚರಿಸಲಾಗುತ್ತದೆ. ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್.ಬೀಳಗಿ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಮಹಾಂತೇಶ್ ಆರ್.ಬೀಳಗಿ ಕೊರೊನಾ ನಿಯಂತ್ರಣ ಹಾಗೂ ಪರೀಕ್ಷೆ ಸೇರಿದಂತೆ ಇತರೆ ವಿಭಾಗಗಳಲ್ಲಿ ಸುಮಾರು 31 ಮೊಬೈಲ್ ಟೀಂಗಳನ್ನು ರಚಿಸಲಾಗುತ್ತಿದೆ. ನಿತ್ಯವೂ 2,500 ಕೊರೊನಾ ಟೆಸ್ಟ್ ಮಾಡುವಂತೆ ಸರ್ಕಾರದಿಂದ ಆದೇಶ ಬಂದಿದ್ದು, ಇದನ್ನು ಪಾಲಿಸಲಾಗುತ್ತಿದೆ. ನಿತ್ಯವೂ 2,500 ಜನರ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತಿದೆ. ಮರಣ ಪ್ರಮಾಣ ಕಡಿಮೆ ಮಾಡಲು ಹೆಚ್ಚಿನ ಆದ್ಯತೆ ನೀಡಿದ್ದು, ಈ ನಿಟ್ಟಿನಲ್ಲಿ ತಂಡ ಹಗಲಿರುಳು ಶ್ರಮಿಸುತ್ತಿದೆ. ಮಾತ್ರವಲ್ಲ, ವೈರಾಣು ತಗುಲಿ ಸಾವನ್ನಪ್ಪುವವರ ಪ್ರದೇಶಗಳಲ್ಲಿ ಹೆಚ್ಚಾಗಿ ಪರೀಕ್ಷೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಇನ್ನು ಜಿಲ್ಲೆಯಲ್ಲಿ 220 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಚಿಕಿತ್ಸೆ ವೇಳೆ ಎಲ್ಲಿಯಾದರೂ ಲೋಪದೋಷ ಆಗಿದೆಯಾ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ತಜ್ಞ ವೈದ್ಯರ ಸಹಕಾರದೊಂದಿಗೆ ಇದನ್ನು ಪತ್ತೆ ಹಚ್ಚುವ ಕಾರ್ಯವು ನಡೆಯುತ್ತಿದೆ. ಇದುವರೆಗೆ ಒಟ್ಟು 130 ರಿಂದ 140 ಡೆತ್ ಆಡಿಟ್ ಆಗಿದೆ. ಇನ್ನೆರಡು ದಿನಗಳಲ್ಲಿ ಉಳಿದ 80 ಡೆತ್ ಆಡಿಟ್ ಬರಲಿದ್ದು, ಇದಕ್ಕಾಗಿ ಕಾಯಲಾಗುತ್ತಿದೆ.
ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿರುವ ವಿಚಾರವೂ ಬೆಳಕಿಗೆ ಬಂದಿದೆ. ವಿದ್ಯಾವಂತರೂ ಸಹ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದು ಆಗಬಾರದು. ಯಾವುದೇ ವದಂತಿಗಳಿಗೆ ಕಿವಿಗೊಡದೇ ಟೆಸ್ಟ್ ಮಾಡಿಸಿಕೊಳ್ಳಿ. ವೈದ್ಯರ ತಂಡವು ಹಗಲಿರುಳು ಶ್ರಮವಹಿಸಿ ಕೆಲಸ ಮಾಡುತ್ತಿದೆ. ಜನರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.