ದಾವಣಗೆರೆ: ಕೊರೊನಾ ಮೂರನೇ ಅಲೆಯ ಭೀತಿ ಶುರುವಾಗಿದೆ. ಒಂದಕ್ಕಿಂತ ಎರಡನೇ ಅಲೆ ಜನರನ್ನು ಹೆಚ್ಚು ಹೈರಾಣಾಗುವಂತೆ ಮಾಡಿತ್ತು. ಹಾಗಾಗಿ, 3ನೇ ಅಲೆಯನ್ನು ತಡೆಗಟ್ಟಲು ದಾವಣಗೆರೆ ಜಿಲ್ಲಾಡಳಿತ ಸಜ್ಜಾಗಿದೆ. ವೈದ್ಯಕೀಯ ಪರಿಣತ ಸಮಿತಿಯೊಂದಿಗೆ ಚರ್ಚಿಸಿ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳು, ಮಾನವ ಸಂಪನ್ಮೂಲಗಳು ಸೇರಿದಂತೆ ಎಲ್ಲಾ ಬಗೆಯ ಸಿದ್ದತೆಗಳನ್ನು ಮಾಡಿಕೊಂಡಿದೆ.
ಕೋವಿಡ್ ಮೂರನೇ ಅಲೆ ಎದುರಿಸಲು ದಾವಣಗೆರೆ ಜಿಲ್ಲಾಡಳಿತ ಸಜ್ಜು ಈಗಾಗಲೇ ಜಿಲ್ಲಾಸ್ಪತ್ರೆ, ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಒಂದು ಆಮ್ಲಜನಕ ಜನರೇಷನ್ ಪ್ಲಾಂಟ್, ಸಿಜಿ ಆಸ್ಪತ್ರೆಯಲ್ಲಿ 6 ಕೆಎಲ್ ಪ್ಲಾಂಟ್, ಎಂಐಸಿಯು ಹಾಗೂ ವಿಐಸಿಯುಗೆ ಬಳಕೆ ಮಾಡಲಾಗ್ತಿದೆ. ಮುಂಜಾಗೃತೆ ಕ್ರಮವಾಗಿ ಪಿಎಂ ಕೇರ್ಸ್ ಅನುದಾನದಿಂದ ಜಿಲ್ಲಾಸ್ಪತ್ರೆಗೆ ತಲಾ ಒಂದು ಸಾವಿರದ 2 ಯೂನಿಟ್ ಎಲ್.ಪಿ.ಎಂ ಹಾಗೂ ಇಎಸ್‍ಐ ಆಸ್ಪತ್ರೆಗೆ 500 ಲೀಟರ್ ಆಮ್ಲಜನಕ ಜನರೇಟರ್ ಪ್ಲಾಂಟ್ಗಳನ್ನು ಸಜ್ಜುಗೊಳಿಸಲಾಗಿದೆ.
ಇದನ್ನೂಓದಿ: ಹಾವೇರಿ: ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣಗಳೇನು?
ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ 65 ಹಾಗೂ 66 ವಾರ್ಡ್‌ಗಳಲ್ಲಿ 36 ಬೆಡ್ ಸಾಮರ್ಥ್ಯದ ಮಕ್ಕಳ ಐಸಿಯುಗಳನ್ನು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈ ಹಿಂದೆ ಬಳಸಿದ ಎಲ್ಲಾ ಮಾನಿಟರ್ಸ್, ವೆಂಟಿಲೇಟರ್ಸ್, ಫ್ಲೋ ಮೀಟರ್ಸ್ಗಳು, ಆಕ್ಸಿಜನ್ ಪೈಪ್‍ಲೈನ್ಸ್ ಸೇರಿದಂತೆ ಎಲ್ಲಾ ಸಲಕರಣೆಗಳನ್ನು ಸುಸಜ್ಜಿತವಾಗಿ ಸಿದ್ಧತೆ ಮಾಡಿಟ್ಟುಕೊಳ್ಳಲಾಗ್ತಿದೆ.
ಇದರೊಂದಿಗೆ ಸೋಂಕು ಹರಡದಂತೆ ತಡೆಯಲು ದಾವಣಗೆರೆ ನಗರದಲ್ಲಿ ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಪೊಲೀಸ್ ಇಲಾಖೆಯೂ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಪ್ರಕ್ರಿಯೆ ಮತ್ತೆ ಶುರು ಮಾಡಲಾಗಿದೆ.