ದಾವಣಗೆರೆ:ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಷ್ಟೇ ಮನವಿ ಮಾಡಿದರೂ ಜನರು ಮಾತ್ರ ಮಾಸ್ಕ್ ಧರಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಮುಖಗವಸು ಹಾಕದವರಿಗೆ ಜಿಲ್ಲಾಡಳಿತ ದಂಡ ವಿಧಿಸುತ್ತಿದೆ.
ಕೊರೊನಾ ತಡೆಗೆ ಹರಸಾಹಸ: ದಾವಣಗೆರೆ ಜಿಲ್ಲಾಡಳಿತದಿಂದ ಮಾಸ್ಕ್ ಧರಿಸದವರಿಗೆ ದಂಡ ನಗರದ ಹದಡಿ ರಸ್ತೆ, ವಿದ್ಯಾರ್ಥಿ ಭವನ, ಪಿ. ಬಿ. ರಸ್ತೆ, ಅರುಣಾ ಚಿತ್ರಮಂದಿರ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಮಾಸ್ಕ್ ಧರಿಸದವರಿಗೆ ಪೊಲೀಸರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ.
ಮಾಸ್ಕ ಧರಿಸದೇ ತಿರುಗಾಡುವವರಿಗೆ ನಗರ ಪ್ರದೇಶಗಳಲ್ಲಿ 1000 ರೂಪಾಯಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂಪಾಯಿ ದಂಡ ನಿಗದಿಪಡಿಸಲಾಗಿದೆ. ಪೊಲೀಸರು ಮಾಸ್ಕ್ ಧರಿಸದ ವಾಹನ ಸವಾರರು, ಸಾರ್ವಜನಿಕರಿಗೆ ದಂಡ ವಿಧಿಸುತ್ತಿದ್ದಾರೆ.
ಈಗಾಗಲೇ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಎಸ್ಪಿ ಹನುಮಂತರಾಯ ಅವರು ವಿಡಿಯೋ ಮಾಡಿ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದ್ದರೂ ಸಾರ್ವಜನಿಕರು ಪಾಲಿಸುತ್ತಿಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹನುಮಂತರಾಯ ಎಚ್ಚರಿಕೆ ನೀಡಿದ್ದಾರೆ.