ಕರ್ನಾಟಕ

karnataka

ETV Bharat / state

ಈ ಬಾರಿ ಸರಳ, ಅರ್ಥಪೂರ್ಣ ರಾಜ್ಯೋತ್ಸವ : ಮಹಾಂತೇಶ್ ಬೀಳಗಿ

ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸರಳವಾಗಿ ಕನ್ನಡ ರಾಜೋತ್ಸವ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

Meeting
Meeting

By

Published : Oct 21, 2020, 7:44 PM IST

ದಾವಣಗೆರೆ: ಕೊರೊನಾ ಮಾರ್ಗಸೂಚಿ ಹಾಗೂ ಚುನಾವಣಾ ಮಾದರಿ ನೀತಿ ಸಂಹಿತೆ ಪಾಲಿಸಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾ ಕೇಂದ್ರದಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ‌ ಮಹಾಂತೇಶ್ ಆರ್. ಬೀಳಗಿ, ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರತಿ ಬಾರಿಗಿಂತ ಭಿನ್ನವಾಗಿರಲಿದೆ. ಹೊರಾಂಗಣದಲ್ಲಿ ಏರ್ಪಡಿಸುವಂತಹ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ನಿಯಮಗಳನ್ನು ರೂಪಿಸಿ ಮಾರ್ಗಸೂಚಿ ಹೊರಡಿಸಿವೆ. ಅಲ್ಲದೇ ಈ ಬಾರಿ ಆಗ್ನೇಯ ಪದವೀಧರ ಕ್ಷೇತ್ರಕ್ಕೂ ಚುನಾವಣೆ ಪ್ರಕ್ರಿಯೆ ನಡೆದಿರುವುದರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಇದನ್ನೂ ಪಾಲಿಸಬೇಕಿದೆ. ಹೀಗಾಗಿ ಆದಷ್ಟು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿಕೊಂಡು ಈ ಬಾರಿ ಕನ್ನಡ ತಾಯಿಯ ಹಬ್ಬ ನಡೆಸಲಾಗುವುದು ಎಂದು ತಿಳಿಸಿದರು.

ಅಂದು ಬೆಳಗ್ಗೆ 8 ಗಂಟೆಗೆ ಕನ್ನಡ ತಾಯಿ ಭುವನೇಶ್ವರಿ ದೇವಿಯ ಮೆರವಣಿಗೆ ನಗರದಲ್ಲಿ ಪ್ರಾರಂಭವಾಗಲಿದ್ದು, ಈ ಬಾರಿ 6 ಕಲಾ ತಂಡಗಳು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಮೆರವಣಿಗೆ ನಡೆಸಲಾಗುವುದು. ಬೆಳಗ್ಗೆ 10 ಗಂಟೆಗೆ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ಸಮಾರಂಭ ನೆರವೇರಲಿದೆ. ಮಾದರಿ ನೀತಿ ಸಂಹಿತೆಯನ್ವಯ ಚುನಾವಣಾ ಆಯೋಗದ ಸೂಚನೆಗಳನ್ನು ಪಾಲಿಸುವ ನಿಟ್ಟಿನಲ್ಲಿ ಈ ಬಾರಿ ಸ್ತಬ್ಧ ಚಿತ್ರ ಪ್ರದರ್ಶನ ಹಾಗೂ ಅಭಿವೃದ್ಧಿ ಪರ ಭಾಷಣ, ಕೋವಿಡ್ ಕಾರಣಕ್ಕಾಗಿ ಈ ಬಾರಿ ಮಕ್ಕಳ ಪಾಲ್ಗೊಳ್ಳುವಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಮೆರವಣಿಗೆ ಹಾಗೂ ಸಮಾರಂಭದಲ್ಲಿ ಎಲ್ಲರೂ ತಪ್ಪದೇ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲ ಕನ್ನಡಪರ ಸಂಘಟನೆಗಳು, ಕನ್ನಡ ಪ್ರೇಮಿಗಳು, ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಮನವಿ‌ ಮಾಡಿದರು.

ಜಿಲ್ಲೆಯ ಎಲ್ಲ ಸರ್ಕಾರಿ, ಅರೆ ಸರ್ಕಾರಿ ಕಟ್ಟಡಗಳು, ಹೋಟೆಲ್‍ಗಳು ಕನ್ನಡ ಪ್ರೇಮಿಗಳು ತಮ್ಮ ಕಟ್ಟಡಗಳಿಗೆ ಹಳದಿ ಹಾಗೂ ಕೆಂಪು ವಿದ್ಯುತ್ ದೀಪಾಲಂಕಾರ ಕೈಗೊಳ್ಳಬೇಕು. ವಿವಿಧ ಕಾರಣಗಳಿಂದ ಕಳೆದ ಬಾರಿಯೂ ಜಿಲ್ಲಾ ಮಟ್ಟದ ರಾಜ್ಯೋತ್ಸವ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ಮಾಡಿಲ್ಲ. ಹೀಗಾಗಿ ಈ ಬಾರಿಯಾದರೂ ನೀತಿ ಸಂಹಿತೆ ಮುಗಿದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವವರನ್ನು ಗುರುತಿಸಿ, ಜಿಲ್ಲಾ ಮಟ್ಟದ ಸಮಾರಂಭದಲ್ಲಿ ಸನ್ಮಾನಿಸಬೇಕು. ಈ ರೀತಿ ಸನ್ಮಾನಕ್ಕೆ ಆಯ್ಕೆಯಾದವರ ಕ್ರಿಮಿನಲ್ ಹಾಗೂ ಅಪರಾಧ ಹಿನ್ನೆಲೆಯನ್ನು ಪರಿಶೀಲಿಸಿದ ಬಳಿಕವೇ ಪಟ್ಟಿಯನ್ನು ಅಂತಿಮಗೊಳಿಸಬೇಕು ಎಂದು ಕನ್ನಡಪರ ಸಂಘಟನೆಗಳ ಕೆಲ ಪ್ರತಿನಿಧಿಗಳು ಮನವಿ ಮಾಡಿದರು.

ಎರಡೂ ವರ್ಷಗಳನ್ನು ಪರಿಗಣಿಸಿ ಸಾಧಕರನ್ನು ಗುರುತಿಸಿ ಆಯ್ಕೆ ಮಾಡಲು ಸನ್ಮಾನ ಸಮಿತಿಯನ್ನು ರಚಿಸಲಾಗುವುದು. ಸನ್ಮಾನಕ್ಕೆ ಆಯ್ಕೆಯಾದವರ ಅಂತಿಮ ಪಟ್ಟಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿ, ಅಂತಹವರ ಹಿನ್ನೆಲೆಯ ಬಗ್ಗೆ ವರದಿ ಪಡೆದ ಬಳಿಕವೇ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ನವೆಂಬರ್ ತಿಂಗಳ ಒಳಗಾಗಿ ಈ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

ABOUT THE AUTHOR

...view details