ದಾವಣಗೆರೆ:ಕೊರೊನಾ ವೈರಸ್ ಹರಡುವಿಕೆ ಹಿನ್ನೆಲೆ ಬಂದ್ ಆಗಿದ್ದ ಬಟ್ಟೆ ಅಂಗಡಿಗಳನ್ನು ಪುನಃ ತೆರೆಯುವ ಕುರಿತು ದಾವಣಗೆರೆ ಡಿಸಿ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕೊರೊನಾ ವೈರಸ್ ಸೋಂಕಿನ ಅರಿವು ಮತ್ತು ನಿಯಂತ್ರಣ ಕುರಿತು ನಗರದ ಜವಳಿ ಅಂಗಡಿಗಳ ಮಾಲೀಕರೊಂದಿಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿದ್ರು.
ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಜನಸಂದಣಿ ಹೆಚ್ಚಿರುವಲ್ಲಿ ಮಾತ್ರ ಅಂಗಡಿಗಳನ್ನು ಮುಚ್ಚಲು ಕ್ರಮ ತೆಗೆದುಕೊಂಡಿದ್ದೇವೆಯೇ ಹೊರತು ಬಟ್ಟೆ ಅಂಗಡಿ ಮಾಲೀಕರಿಗೆ ತೊಂದರೆ ಕೊಡುವ ಹಾಗೂ ನಷ್ಟ ಮಾಡುವ ದುರುದ್ದೇಶ ಜಿಲ್ಲಾಡಳಿತಕ್ಕಿಲ್ಲ ಎಂದರು.
ಈಗಾಗಲೇ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಬಟ್ಟೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ. ಅದೇ ರೀತಿ ದಾವಣಗೆರೆ ನಗರದಲ್ಲಿ ಹಬ್ಬಗಳ ಹಿನ್ನೆಲೆ ಜವಳಿ ಅಂಗಡಿ ಮಾಲೀಕರ ಒತ್ತಾಯದ ಮೇರೆಗೆ ಕೆಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಅಂಗಡಿ ಮಾಲೀಕರು ಅವಘಡ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಕೆಲ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಿದರು.
ಆರೋಗ್ಯ ಇಲಾಖೆ ವತಿಯಿಂದ ಪ್ರತಿ ಅಂಗಡಿ ಮುಖ್ಯದ್ವಾರದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳನ್ನು ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಜನ ಸಂದಣಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಅಂಗಡಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಶೀತ, ಕೆಮ್ಮಿನ ಲಕ್ಷಣಗಳು ಕಂಡುಬಂದಲ್ಲಿ ಅಂತಹವರನ್ನು ಕೆಲಸದಿಂದ ತಾತ್ಕಾಲಿಕವಾಗಿ ರಜೆ ಮೇಲೆ ಕಳುಹಿಸಬೇಕು ಮತ್ತು ಗ್ರಾಹಕರಿಗೆ ಫ್ಲೂ ಕಂಡುಬಂದಲ್ಲಿ ನೇರವಾಗಿ ಆಸ್ಪತ್ರೆಗೆ ಕಳುಹಿಸಬೇಕು. ಅಂಗಡಿಯ ಕೌಂಟರ್ಗಳಲ್ಲಿ ಸ್ಯಾನಿಟೈಸರ್ಗಳನ್ನು ಇಟ್ಟು ಇವುಗಳನ್ನು ಬಳಸುವಂತೆ ತಿಳಿಸಬೇಕು. ಲಿಫ್ಟ್ ಮತ್ತು ಎಸಿ ಯ ಬಳಕೆ ಸಂಪೂರ್ಣವಾಗಿ ನಿಲ್ಲಿಸಬೇಕು. ಪ್ರತಿ ಗಂಟೆಗೆ ಒಂದು ಸಲ ಅಂಗಡಿಯನ್ನು ಸ್ವಚ್ಚಗೊಳಿಸಬೇಕು. ಗ್ರಾಹಕರ ನಡುವೆ ಅಂತರವನ್ನು ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದು. ಪ್ರತಿ ಅಂಗಡಿಗೆ ಒಂದೇ ಮುಖ್ಯದ್ವಾರ ಇರುವಂತೆ ನೋಡಿಕೊಳ್ಳಬೇಕು. ಅಂಗಡಿಗಳು ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ತೆರೆಯಬೇಕು. ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.
ಹೋಟೆಲ್, ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ಜಿಲ್ಲೆಯಲ್ಲಿ ಕೋಳಿ ಮಾಂಸ ಮಾರುವ ಹಾಗೂ ಮೊಟ್ಟೆ ಅಂಗಡಿಗಳನ್ನು ಮುಚ್ಚಿಸಲಾಗಿದ್ದು, ಈ ವ್ಯಾಪಾರಸ್ಥರಿಗೆ ಸಾಕಷ್ಟು ನಷ್ಟವಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲಿನ ದುಷ್ಪರಿಣಾಮದ ಕುರಿತು ಅವಲೋಕಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಕೊರೊನಾ ಸೋಂಕು ನಿರ್ವಹಣೆಯಲ್ಲಿ ಅಂಗಡಿ ಮಾಲೀಕರು ಸಹ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.