ದಾವಣಗೆರೆ : ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದರೂ ಆರ್ಥಿಕ ಚಟುವಟಿಕೆಗಳಿಗೆ ಜಿಲ್ಲಾಡಳಿತ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಷರತ್ತುಬದ್ಧ ಅನುಮತಿ ನೀಡಿದೆ.
ವರ್ತಕರು ಮತ್ತು ವಿವಿಧ ವ್ಯಾಪಾರಿ ಸಂಘಗಳ ಸದಸ್ಯರು 12 ಗಂಟೆಗಳ ಕಾಲ ವ್ಯಾಪಾರ, ವಹಿವಾಟು ನಡೆಸಲು ಅನುಮತಿ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಆರ್ ಬೀಳಗಿ, ಜಿಲ್ಲೆ ಕೆಂಪು ವಲಯದಲ್ಲಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿ ಎಲ್ಲಾ ಆರೋಗ್ಯ ಪ್ರೊಟೋಕಾಲ್ಗಳನ್ನು ಪಾಲಿಸಿಕೊಂಡು ಆರ್ಥಿಕ ಚುಟವಟಿಕೆ ನಡೆಸಲು ಅನುಮತಿ ನೀಡಿದ್ದಾರೆ.
ಇದರಿಂದ ಕೈಗಾರಿಕಾ ಪ್ರದೇಶ ಮತ್ತು ಗ್ರಾಮಾಂತರ ಕೈಗಾರಿಕೆಗಳು, ರಫ್ತು, ಅಗತ್ಯ ವಸ್ತುಗಳ ಅಂಗಡಿಗಳು, ಸಣ್ಣಪುಟ್ಟ ಬಟ್ಟೆ ಅಂಗಡಿ, ಸ್ಟುಡಿಯೋ, ಮೆಕ್ಯಾನಿಕ್ ಶಾಪ್, ಉತ್ಪಾದನಾ ಘಟಕಗಳು, ಇ-ಕಾಮರ್ಸ್, ಸರ್ಕಾರಿ ಕಚೇರಿಗಳು ಹಾಗೂ ಶೇ.33 ಸಿಬ್ಬಂದಿಯೊಂದಿಗೆ ಖಾಸಗಿ ಕಚೇರಿಗಳನ್ನ ತೆರೆಯಬಹುದಾಗಿದೆ.
ಕೊರೊನಾ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಎಸ್‌ಪಿಯಿಂದ ಮಾಹಿತಿ.. ಆರ್ಥಿಕ ಚಟುವಟಿಕೆದಾರರು ನಗರ ಪಾಲಿಕೆಗೆ ಸ್ವಯಂ ಘೋಷಣಾ ಮುಚ್ಚಳಿಕೆ ಬರೆದು ಚಟುವಟಿಕೆ ಆರಂಭಿಸಬೇಕು. ಕೋವಿಡ್-19 ನಿಯಂತ್ರಣ ಕುರಿತಾದ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಮೊದಲು ಎರಡು ಬಾರಿ ಎಚ್ಚರಿಕೆ ನೀಡಿ, ಮೂರನೇ ಬಾರಿಗೆ ಪಾಲಿಕೆಗೆ ಆದೇಶಿಸಿ ಅಂತಹ ಸಂಸ್ಥೆಗಳನ್ನು ಸೀಲ್ ಮಾಡಿಸಲಾಗುವುದು. ಆದ್ದರಿಂದ ಎಲ್ಲರೂ ಸಾಮಾಜಿಕ ಅಂತರ, ಶುಚಿತ್ವ ಕಾಪಾಡಿಕೊಂಡು ವಹಿವಾಟು ನಡೆಸಬೇಕೆಂದರು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸರ್ಕಾರದ ಮೇ 1 ಮತ್ತು 2ರ ಮಾರ್ಗಸೂಚಿಯಂತೆ ಯಾವುದೇ ವಲಯವಿದ್ದರೂ ಅಂತಹ ಜಿಲ್ಲೆಯ ರಾಜ್ಯ ಸಾರಿಗೆ, ವಿಮಾನಯಾನ, ಶಾಲಾ-ಕಾಲೇಜು, ಸಿನಿಮಾ, ಪಾರ್ಕ್, ಧರ್ಮ ಸಭೆಗಳು, ಇತರೆ ಸಭೆ ಸಮಾರಂಭಗಳು, ಪ್ರಾರ್ಥನಾ ಮಂದಿರಗಳು, ದೇವಸ್ಥಾನಗಳಲ್ಲಿ ಸೇರುವುದು, ಶಾಪಿಂಗ್ ಮಾಲ್‍ಗಳು, ಮನರಂಜನಾ ಸ್ಥಳಗಳು, ಕ್ಷೌರದ ಅಂಗಡಿಗಳು, ಜಿಮ್, ಬಾರ್ ಸೇರಿ ಜನಸಂದಣಿ ಆಗುವ ಚಟುವಟಿಕೆಗಳನ್ನು ಪುನಾರಂಭಿಸುವುದನ್ನು ನಿರ್ಬಂಧಿಸಿದೆ ಎಂದು ತಿಳಿಸಿದರು.
ನಗರದಲ್ಲಿ ವಿವಿಧ ಹೋಟೆಲ್, ಲಾಡ್ಜ್‌ಗಳನ್ನು ಕೋವಿಡ್-19 ಐಸೋಲೇಷನ್ ಕೇಂದ್ರಗಳಾಗಿ ಬಳಸಿಕೊಳ್ಳಲಾಗುತ್ತಿದೆ. ಪಾಲಿಕೆ, ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರ ನಿಗದಿಪಡಿಸಿದ ದರವನ್ನು ಈ ಲಾಡ್ಜ್ ಮಾಲೀಕರಿಗೆ ಭರಿಸಲಾಗುವುದು. ಅಥವಾ ಯಾವುದೇ ಇತರೆ ಕಟ್ಟಡವನ್ನು ಬಳಕೆ ಮಾಡಿಕೊಂಡರೂ ಸರ್ಕಾರದ ನಿಯಮಾನುಸಾರ ಪಾವತಿಸಲಾಗುವುದು. ಇನ್ನು ಅಹಮದಾಬಾದ್ ಪ್ರಯಾಣ ಹಿನ್ನೆಲೆ ಹೊಂದಿರುವ 22 ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಅವರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ನಗರದ ಶಿವನಗರವನ್ನು ಕಂಟೇನ್ಮೆಂಟ್ ಝೋನ್ ಮಾಡುವ ಬಗ್ಗೆ ಸ್ಥಳೀಯರಿಂದ ಸ್ವಲ್ಪ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಡಿಸಿ, ಪಾಲಿಕೆ ಆಯುಕ್ತರು ಜತೆಗೆ ನಾನೂ ಕೂಡ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿರುವೆ. ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು ಎಂದು ತಿಳಿಸಿ ಬಂದಿದ್ದೇವೆ. ಜೊತೆಗೆ ಕುಡಿಯುವ ನೀರಿನ ಬೇಡಿಕೆಗೆ ಸ್ಪಂದಿಸಿ ಪಾಲಿಕೆ ವತಿಯಿಂದ ಮೋಟಾರ್ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.