ದಾವಣಗೆರೆ: ಸದಾ ಯಡವಟ್ಟುಗಳಿಂದಲೇ ಸುದ್ದಿಯಾಗಿರುವ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಗೆ ಜನಿಸಿದ ಮಗು ಗಂಡೋ, ಹೆಣ್ಣೋ ಎಂಬ ಗೊಂದಲ ಸೃಷ್ಟಿಯಾಗಿದೆ.
ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಮಲ್ಲೇಶ್ವರಿ ಎಂಬುವರಿಗೆ ಅಕ್ಟೋಬರ್ 8 ರಂದು ಮಗು ಜನಿಸಿತ್ತು. ಡಿಸ್ಚಾರ್ಜ್ ಆಗಿ ಮನೆಗೆ ಬಂದ ಬಳಿಕ ಆಶಾ ಕಾರ್ಯಕರ್ತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿ, ನಿಮ್ಮ ಗಂಡು ಮಗುವಿನ ಆರೋಗ್ಯ ಹೇಗಿದೆ ಎಂದಿದ್ದಾರೆ. ಇದಕ್ಕೆ ಮಗುವಿನ ತಾಯಿ ಮಲ್ಲೇಶ್ವರಿ, ನನಗೆ ಜನಿಸಿದ್ದು ಹೆಣ್ಣು ಮಗು ಎಂದಿದ್ದಾರೆ. ಈ ವೇಳೆ ತಮ್ಮಲ್ಲಿದ್ದ ದಾಖಲೆ ತೋರಿಸಿದ ದಾದಿ, ಇದರಲ್ಲಿ ನೋಡಿ ನಿಮ್ಮ ಹೆಸರಿನ ಮುಂದೆ ಗಂಡು ಮಗು ಜನಿಸಿರುವುದಾಗಿ ನಮೂದಿಸಲಾಗಿದೆ ಎಂದು ಹೇಳಿದ್ದಾರೆ. ಇದರಿಂದ ತಾಯಿಗೆ ಜನಿಸಿದ ಮಗು ಯಾವುದು ಎಂಬ ಅನುಮಾನ ಕಾಡತೊಡಗಿದೆ.
ಈ ವಿಚಾರವಾಗಿ ಕುಟುಂಬಸ್ಥರು ಜಿಲ್ಲಾಸ್ಪತ್ರೆಯಲ್ಲಿ ದಾಖಲೆಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಿ, ಪರಿಶೀಲಿಸಿದರು. ಆಸ್ಪತ್ರೆಯ ಸರ್ಜನ್ ಡಾ.ನಾಗರಾಜ್ ಅವರನ್ನು ಕೇಳಿದರೆ, ಅರ್ಜಿ ಸ್ವೀಕರಿಸಿ ಎರಡು ದಿನಗಳ ಕಾಲ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ದಾಖಲೆಗಳನ್ನು ಪೋಷಕರಿಗೆ ಸಹ ತೋರಿಸಿದ್ದೇವೆ. ಎಲ್ಲ ದಾಖಲೆಗಳಲ್ಲೂ ಹೆಣ್ಣು ಮಗು ಎಂದು ದಾಖಲಾಗಿದೆ. ಖಾಸಗಿ ಸಂಸ್ಥೆಯವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ ದಾಖಲೆಯಲ್ಲಿ ತಪ್ಪಾಗಿ ಗಂಡು ಮಗು ಎಂದು ದಾಖಲಾಗಿರಬಹುದು ಎನ್ನುತ್ತಾರೆ.
ಮಲ್ಲೇಶ್ವರಿಗೆ ಜನಿಸಿದ ಮಗು ಹೆಣ್ಣು ಎಂಬುದು ವೈದ್ಯರ ಸ್ಪಷ್ಟನೆ. ಆದರೆ, ಕುಟುಂಬಸ್ಥರಲ್ಲಿ ಈ ಗೊಂದಲ ಮುಂದುವರಿದಿದ್ದು, ಮಗುವಿನ ಡಿಎನ್ಎ ಪರೀಕ್ಷೆಗೂ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ ಪೋಷಕರು ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.