ದಾವಣಗೆರೆ:ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಎಂಬ ಚರ್ಚೆಗಳು ಈಗಾಗಲೇ ಶುರುವಾಗಿವೆ.
ಜಿಲ್ಲೆಯಲ್ಲಿ ಹಲವು ವರ್ಷಗಳಿಂದಲೂ ಬಿಜೆಪಿ ಪಕ್ಷಕ್ಕೆ ನಿಷ್ಠರಾಗಿರುವ ಮತ್ತು ಸಂಘ ಪರಿವಾರದ ಜೊತೆ ಉತ್ತಮ ಒಡನಾಟ ಹೊಂದಿರುವ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಅವರ ಹೆಸರು ಮೂಂಚೂಣಿಯಲ್ಲಿದೆ. ಸಾದು ಲಿಂಗಾಯತ ಸಮುದಾಯದ ಓರ್ವ ಶಾಸಕ ಬಿಜೆಪಿಯಲ್ಲಿರುವುದರಿಂದ ಇವರಿಗೇ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
1994ರಲ್ಲಿ ಮೊದಲ ಬಾರಿಗೆ ಮಾಯಕೊಂಡ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಶಾಸಕರಾಗಿದ್ದ ಎಸ್.ಎ.ರವೀಂದ್ರನಾಥ್, 2006ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಸರ್ಕಾರದಲ್ಲಿ ಸಚಿವರಾಗಿದ್ದರು. ಬಳಿಕ 2008ರಲ್ಲೂ ಐದು ವರ್ಷ ಮಂತ್ರಿಯಾಗಿದ್ದರು. 2013ರ ಚುನಾವಣೆಯಲ್ಲಿ ಸೋಲು ಕಂಡಿದ್ದ ರವೀಂದ್ರನಾಥ್, 2018ರ ಚುನಾವಣೆಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನ ಸೋಲಿಸಿ ಜಯ ಗಳಿಸಿದ್ದರು. ಒಟ್ಟು ಆರು ಬಾರಿ ಶಾಸಕರಾಗಿರುವ ರವೀಂದ್ರನಾಥ್ ಬಿಜೆಪಿಯ ಹಿರಿಯ ನಾಯಕರಾಗಿರುವ ಕಾರಣಕ್ಕೆ ಇವರಿಗೆ ಹೈಕಮಾಂಡ್ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.