ದಾವಣಗೆರೆ:2023 ರ ವಿಧಾನಸಭಾ ಚುನಾವಣೆಗೆ ಹಾಲಿ ಮಾಜಿ ಶಾಸಕರು ತೆರೆಮರೆಯಲ್ಲಿ ಸನ್ನದ್ಧರಾಗುತ್ತಿದ್ದಾರೆ. ದಾವಣಗೆರೆ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರದ ಎರಡು ಕ್ಷೇತ್ರಗಳಿಂದ ಹಾಲಿ ಕೈ ಕಮಲದ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಆದರೆ ಮಾಜಿ ಸಚಿವರೊಬ್ಬರು ಮಾತ್ರ ಕೆಪಿಸಿಸಿಗೆ ಎರಡು ಲಕ್ಷ ಕೊಟ್ಟು ಟಿಕೆಟ್ಗಾಗಿ ಅರ್ಜಿ ಹಾಕಲು ಮುಂದಾಗಿಲ್ಲ.
ಮಧ್ಯ ಕರ್ನಾಟಕದ ಕೇಂದ್ರ ಬಿಂದು, ರಾಜ್ಯ ರಾಜಕೀಯದ ಲೆಕ್ಕಾಚಾರದ ಪ್ರಮುಖ ಹಾಟ್ಸ್ಪಾಟ್ ಎಂದೇ ಗುರುತಿಸಲ್ಪಟ್ಟ ದಾವಣಗೆರೆಯಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯ ಲೆಕ್ಕಾಚಾರ ಜೋರಾಗಿದೆ. ವಿಶೇಷ ಎಂದರೆ ದಾವಣಗೆರೆ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರದ ಇಬ್ಬರು ಹಾಲಿ ಶಾಸಕರು ಚುನಾವಣೆ ಎದುರಿಸಲು ಸನ್ನದ್ಧರಾಗಿರುವುದು ಜನ ಹುಬ್ಬೇರಿಸುವಂತೆ ಮಾಡಿದೆ.
ಟಿಕೆಟ್ ನಿರೀಕ್ಷೆಯಲ್ಲಿ ರವೀಂದ್ರನಾಥ್, ಅರ್ಜಿ ಹಾಕದೇ ಟಿಕೆಟ್ ಪಡೆಯುವ ನಂಬಿಕೆಯಲ್ಲಿ ಎಸ್ಎಸ್ ಮಲ್ಲಿಕಾರ್ಜುನ್ ಬಿಜೆಪಿ ಪಕ್ಷದಲ್ಲಿ 75 ವಯಸ್ಸು ದಾಟಿದರೆ ಅಂತಹ ಅಭ್ಯರ್ಥಿಗೆ ಟಿಕೆಟ್ ನೀಡಲ್ಲ ಎಂಬ ನಿಯಮವನ್ನು ಅಳವಡಿಸಿಕೊಂಡಿದ್ದರೂ ದಾವಣಗೆರೆ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಎಸ್ಎ ರವೀಂದ್ರನಾಥ್ ಸ್ಪರ್ಧೆಗೆ ಸನ್ನದ್ಧರಾಗಿರುವುದು ಅಚ್ಚರಿ ಮೂಡಿಸಿದೆ. ಪಕ್ಷ ಕೂಡ ಟಿಕೆಟ್ ಕೊಡುತ್ತೆ ಸ್ಪರ್ಧೆ ಮಾಡ್ತೀನಿ ಎಂದು ರವೀಂದ್ರನಾಥ್ ಉತ್ಸಾಹ ತೋರಿದ್ದಾರೆ.
ಹುಟ್ಟುಹಬ್ಬದ ವೇಳೆ ಟಿಕೆಟ್ ಸುಳಿವು:ಇನ್ನು ಅವರ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಎಸ್ಎ ರವೀಂದ್ರನಾಥ್ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದರು. ಇದಲ್ಲದೇ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್ ಕೂಡ ನಮ್ ರವೀಂದ್ರಣ್ಣ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಗುಟ್ಟನ್ನು ರಟ್ಟುಮಾಡಿದ್ದರು.
ದಾವಣಗೆರೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ನ ಹಿರಿಯ ಶಾಸಕ 92 ವರ್ಷದ ಶಾಮನೂರು ಶಿವಶಂಕರಪ್ಪ ಅವರು ಕೂಡ ಕಳೆದ 2018 ರ ಚುನಾವಣೆ ಕೊನೆಯ ಚುನಾವಣೆ ಎಂದು ಘೋಷಿಸಿದ್ದರು. ಆದರೆ ಈ ಬಾರಿ ಮಾತ್ರ ಎಲ್ಲರಿಗಿಂತ ಮೊದಲು ಬೆಂಗಳೂರಿಗೆ ದೌಡಾಯಿಸಿ ಟಿಕೆಟ್ಗಾಗಿ ಕೆಪಿಸಿಸಿ ಕಚೇರಿಯಲ್ಲಿ ಎರಡು ಲಕ್ಷ ಹಣ ಕಟ್ಟಿ ಅರ್ಜಿ ಹಾಕಿದ್ದಾರೆ.
92 ವರ್ಷ ದಾಟಿದರೂ ಕೂಡ ಶಿವಶಂಕರಪ್ಪ ಅವರು ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದು ಸಾಕಷ್ಟು ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿಯೇ ಹೇಳಿ ಬಿಟ್ಟಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ಗೆ ಮಾತ್ರ ಶಾಮನೂರು ನಡೆ ಇಕ್ಕಟಿಗೆ ಸಿಲುಕುವಂತೆ ಮಾಡಿದೆ.
ಅರ್ಜಿ ಹಾಕದ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್: ಇತ್ತ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಹಾಗೂ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಮಾತ್ರ ಟಿಕೆಟ್ಗೆ ಅರ್ಜಿಯೇ ಹಾಕಿಲ್ಲ. ಕೇಳಿದರೆ ಎರಡು ಲಕ್ಷ ಏಕೆ ಕೆಪಿಸಿಸಿಗೆ ಕೊಡಬೇಕು ಸ್ವಾಮಿ ನಾನು ಪ್ರಮಾಣಿಕ, ಅದಕ್ಕೆ ಅರ್ಜಿ ಹಾಕಲ್ಲ ಅವರೇ ನಮಗೆ ಟಿಕೆಟ್ ಕೊಡುತ್ತಾರೆ ಎಂದು ಸ್ವಪಕ್ಷದವರ ವಿರುದ್ಧವೇ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಮಲ್ಲಿಕಾರ್ಜುನ್ ಅವರು ದಾವಣಗೆರೆ ಉತ್ತರ ಕ್ಷೇತ್ರದಿಂದ ಕಳೆದ ಬಾರಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಹಾಲಿ ಶಾಸಕ ಎಸ್ಎ ರವೀಂದ್ರನಾಥ್ ವಿರುದ್ಧ ಸೊಲುಂಡಿದ್ದರು. ಆದರೆ, ಈ ಬಾರಿ ಚುನಾವಣೆ ಸ್ಪರ್ಧಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ:ನಾನು ಪ್ರಾಮಾಣಿಕ.. ಕೆಪಿಸಿಸಿಗೆ 2 ಲಕ್ಷ ಕೊಟ್ಟು ಏಕೆ ಟಿಕೆಟ್ ಪಡೆಯಬೇಕು: ಎಸ್ಎಸ್ ಮಲ್ಲಿಕಾರ್ಜುನ್ ಪ್ರಶ್ನೆ