ದಾವಣಗೆರೆ: ಪ್ರಿಯಕರನ ಜತೆ ಸೇರಿ ಸೊಸೆಯೇ ಅತ್ತೆಯನ್ನೇ ಕೊಲೆ ಮಾಡಿದ್ದು, ಸೊಸೆ ಮತ್ತು ಆಕೆಯ ಪ್ರಿಯಕರನನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ.
ಹತ್ಯೆಗೀಡಾದ ಮಹಿಳೆಯ ಸೊಸೆ ಹಾಗೂ ಆಕೆಯ ಪ್ರಿಯಕರ ಆನಂದ್ ಬಂಧಿತ ಆರೋಪಿಗಳು. ನ್ಯಾಮತಿ ತಾಲೂಕಿನ ಒಡೆಯರ ಹತ್ತೂರು ಗ್ರಾಮದ ರತ್ನಮ್ಮ ಕಳೆದ ನವೆಂಬರ್ 8ರಂದು ಮೃತಪಟ್ಟಿದ್ದರು. ಅಂತ್ಯಸಂಸ್ಕಾರವನ್ನೂ ನೆರವೇರಿಸಲಾಗಿತ್ತು. ಆದರೆ ನವೆಂಬರ್ 23ರಂದು ಅವರ ಪುತ್ರ ಹರೀಶ್ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದಾವಣಗೆರೆಯಲ್ಲಿ ಪ್ರಿಯಕರನ ಜತೆ ಸೇರಿ ಅತ್ತೆಯನ್ನು ಕೊಂದ ಸೊಸೆ ‘ನನ್ನ ತಾಯಿ ಕೊಲೆಗೀಡಾಗಿದ್ದು, ಇದಕ್ಕೆ ದಂಡಿ ಆನಂದ್ ಎಂಬಾತ ಕಾರಣ’ ಎಂದು ದೂರಿನಲ್ಲಿ ಆರೋಪಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಮತಿ ಪೊಲೀಸರು ವಿಚಾರಣೆ ನಡೆಸಿದಾಗ ಸೊಸೆ ಹಾಗೂ ಆನಂದ ನಡುವೆ ವಿವಾಹೇತರ ಸಂಬಂಧವಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಅತ್ತೆ ರತ್ನಮ್ಮಗೆ ಸೊಸೆಯ ವಿವಾಹೇತರ ಸಂಬಂಧದ ವಿಚಾರ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಆತಂಕಗೊಂಡು ಸೊಸೆ, ತನ್ನ ಪ್ರಿಯಕರನೊಂದಿಗೆ ಸೇರಿ ಅತ್ತೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಳು.
ಈ ಎಲ್ಲ ವಿಚಾರ ತನಿಖೆ ವೇಳೆ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯ ಮರಣೋತ್ತರ ಪರೀಕ್ಷೆ ನಾಳೆ ನಡೆಯಲಿದ್ದು, ಇದಕ್ಕೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.