ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಗಡಿಗ್ರಾಮ ಮಸಣಿಕೆರೆಯ ಶ್ರೀ ಪದ್ಮಾವತಿ ಚೌಡೇಶ್ವರಿ ದೇವಸ್ಥಾನ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದೇ ಗ್ರಾಮದ ಜಯಪ್ಪ ಎಂಬುವರ ತೋಟದಲ್ಲಿ ಕಳೆದ ನೂರಾರು ವರ್ಷಗಳಿಂದ ದಲಿತರು ಹಾಗೂ ಗ್ರಾಮಸ್ಥರು ಪುಟ್ಟ ದೇವಸ್ಥಾನ ಅಭಿವೃದ್ಧಿ ಪಡಿಸಿದರು. ಕಾಲ ಕ್ರಮೇಣ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಆದಾಯವೂ ಕೂಡ ಜಾಸ್ತಿಯಾಗಿದೆ.
ಆದಾಯ ಜಾಸ್ತಿಯಾಗುತ್ತಿದ್ದಂತೆ ವೀರಭದ್ರೇಶ್ವರ ನೆಲೆ ಇರುವ ಜಾಗದಲ್ಲಿ ಚೌಡಮ್ಮ ಇದ್ದರೆ ಸಮಸ್ಯೆ ಆಗುತ್ತೆ ಎಂದು ಪೂರ್ವಿಕರು ಚೌಡಮ್ಮ ದೇವಿಯನ್ನು ಗ್ರಾಮದ ಹೊರವಲಯಕ್ಕೆ ಸಾಗಿಸಿದ್ರು. ನಂತರ ವರ್ಷಕ್ಕೆ 25 ಲಕ್ಷ ರೂಪಾಯಿ ಆದಾಯದ ಜತೆಗೆ ಹರಕೆ ರೂಪದಲ್ಲಿ ಚಿನ್ನ, ಬೆಳ್ಳಿ ಆಭರಣಗಳು ಬರಲಾರಂಭಿಸಿದವು.
ಜಯಪ್ಪನವರು ತಮ್ಮದೇ ಕುಟುಂಬದವರು ಹಾಗೂ ಪರಿಚಯಸ್ಥರ ಹೆಸರಲ್ಲಿ ಟ್ರಸ್ಟ್ ಸ್ಥಾಪಿಸಿಕೊಂಡು ದೇವಸ್ಥಾನ ಟ್ರಸ್ಟ್ ಒಡೆತನಕ್ಕೆ ಸೇರಿದರು ಎಂದು ಘೋಷಿಸಿಕೊಂಡ್ರು. ಅಂದಿನಿಂದಲೂ ದಲಿತರಿಗೆ ಈ ದೇವಸ್ಥಾನಕ್ಕೆ ಪ್ರವೇಶ ಇಲ್ಲವಂತೆ. ಏಳು ವರ್ಷದ ಅವಧಿಯಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಆದಾಯ ಇರುವ ಈ ದೇವಾಲಯಕ್ಕೆ ದಲಿತರಿಗೆ ಪ್ರವೇಶ ಇಲ್ಲದೇ ಇರುವುದು ಆಕ್ರೋಶಕ್ಕೆ ಕಾರಣ ಆಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವಂತೆ.