ಹರಿಹರ: ಲೋಕಕಲ್ಯಾಣ ಹಾಗೂ ವಿಶ್ವಶಾಂತಿಗಾಗಿ ಮೂಲತಃ ಅಯೋಧ್ಯೆ ದಿಗಂಬರ ಅಖಾಡದ ವಾಸಿಗಳಾದ ಸಂತ ಅವದೇಶ್ ದಾಸ್ ಹಾಗೂ ಸಂತ ಮದ ಮೋಹನ್ ದಾಸ್ ಅವರು ಜ್ಯೋತಿರ್ಲಿಂಗಗಳ ದರ್ಶನಾರ್ಥವಾಗಿ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.
ಅಯೋಧ್ಯೆಯ ದಿಗಂಬರ ಸಂತರಿಂದ ಲೋಕಕಲ್ಯಾಣ ಹಾಗೂ ವಿಶ್ವಶಾಂತಿಗಾಗಿ ಸೈಕಲ್ ಯಾತ್ರೆ! - ದಾವಣಗೆರೆ ಸುದ್ದಿ
ಲೋಕಕಲ್ಯಾಣ ಹಾಗೂ ವಿಶ್ವಶಾಂತಿಗಾಗಿ ಮೂಲತಃ ಅಯೋಧ್ಯೆ ದಿಗಂಬರ ಅಖಾಡದ ವಾಸಿಗಳಾದ ಸಂತ ಅವದೇಶ್ ದಾಸ್ ಹಾಗೂ ಸಂತ ಮದ ಮೋಹನ್ ದಾಸ್ ಅವರು ಜ್ಯೋತಿರ್ಲಿಂಗಗಳ ದರ್ಶನಾರ್ಥವಾಗಿ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.
ಹರಿಹರದ ವಿದ್ಯಾನಗರದಲ್ಲಿರುವ ಶ್ರೀಕ್ಷೇತ್ರ ಐರಣಿ ಶಾಖಾ ಹೊಳೆಮಠದಲ್ಲಿ ವಿಶ್ರಾಂತಿ ಪಡೆದು ನಂತರ ಮಾಹಿತಿ ನೀಡಿದ ಅವರು, ಉತ್ತರ ಭಾರತದ ಪ್ರವಾಸವನ್ನು ಮುಗಿಸಿ ದಕ್ಷಿಣ ಭಾರತದಲ್ಲಿ ಸಂಚರಿಸಿ, ಹುಬ್ಬಳ್ಳಿಯ ಮೂಲಕ ಇಂದು ಹರಿಹರಕ್ಕೆ ಬಂದಿದ್ದೇವೆ. ಅಯೋಧ್ಯೆಯಿಂದ ಹೊರಟು ನಾಲ್ಕು ತಿಂಗಳಾಗಿದೆ. ಈಗಾಗಲೇ ಓಂಕಾರೇಶ್ವರ, ತ್ರಯಂಬಕೇಶ್ವರ, ಭೀಮಾಶಂಕರ ಲಿಂಗ, ಗಿಷ್ಮೇಶ್ವರ ಲಿಂಗ ದರ್ಶನ ಮಾಡಿದ್ದು, ಕರ್ನಾಟಕದ ಶೃಂಗೇರಿ, ಉಡುಪಿ, ಮಂಗಳೂರು ಮೂಲಕ ಕನ್ಯಾಕುಮಾರಿಗೆ ಹೋಗಿ ನಂತರ ರಾಮೇಶ್ವರ, ಶ್ರೀಶೈಲ, ಪುರಿ ಜಗನ್ನಾಥ, ನೇಪಾಳ ಪಶುಪತಿನಾಥ ದರ್ಶನ ಮಾಡಿ, ದಕ್ಷಿಣ ಭಾರತದ ಪವಿತ್ರ ದೇವಸ್ಥಾನಗಳ ದರ್ಶನವನ್ನು ಮಾಡಿಕೊಂಡು ಪುನಃ ಅಯೋಧ್ಯೆಗೆ ಮರಳುತ್ತೇವೆ ಹಾಗೂ ಈ ಯಾತ್ರೆಯು ವಿಶ್ವಕಲ್ಯಾಣ ಹಾಗೂ ವಿಶ್ವಶಾಂತಿಗಾಗಿ ಈ ಸೈಕಲ್ ಪ್ರವಾಸ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ನಂತರ ಶ್ರೀ ಐರಣಿ ಹೊಳೆಮಠದಲ್ಲಿ ಸ್ಥಳೀಯ ವೈದ್ಯರನ್ನು ಕರೆಯಿಸಿ ಈ ಇಬ್ಬರಿಗೂ ವೈದ್ಯಕೀಯ ತಪಾಸಣೆ ಮಾಡಿಸಿ ಯಾವುದೇ ರೀತಿಯ ಸೋಂಕು ಕಾಯಿಲೆಗಳು ಹರಡದಂತೆ ಚುಚ್ಚುಮದ್ದನ್ನು ನೀಡಲಾಯಿತು. ಹಾಗೂ ಪ್ರಥಮ ಚಿಕಿತ್ಸೆಗೆ ಬೇಕಾದಂತಹ ಔಷಧಿಗಳನ್ನು ನೀಡಲಾಯಿತು. ಈ ವೇಳೆ ನಾಗರಾಜ್ ಮೆಹರ್ವಾಡೆ, ಎನ್.ಇ. ಸುರೇಶ್ ಸ್ವಾಮಿ, ವಸಂತ್ ಭೂತೆ, ಮಠದ ಸಿದ್ದಣ್ಣ, ಹನುಮಂತ, ಮಹಾಂತೇಶ್ ಹಾಜರಿದ್ದು ಯಾತ್ರಾರ್ಥಿಗಳಿಗೆ ಶುಭ ಹಾರೈಸಿ ಅವರುಗಳ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿದರು.