ದಾವಣಗೆರೆ :ದರೋಡೆಗೆ ಹೊಂಚು ಹಾಕಿದ್ದವರನ್ನು ಜಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದು, ಬಂಧಿತ 6 ಜನರು ಕೂಡ ಪುರಾತನ ದೇವಾಲಯಗಳಲ್ಲಿ ನಿಧಿಗಾಗಿ ಶೋಧ ಮಾಡ್ತಿದ್ದವರೆಂದು ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.
ಇನ್ನು ಬಂಧಿತರನ್ನು ಕಲ್ಲೇಶಿ. ಪಿ (48), ದಿವಾನ್ ಸಾಬ್ ಜಾವೀದ್, ಮಲ್ಲಿಕಾರ್ಜುನ ಮಲ್ಲೇಶಿ (30), ಹನುಮಂತ ಸೋಪಾನಿಪವಾರ್(33) ಅಮೀರ್ ಖಾನ್ ಪಠಾಣ್ (30), ಮುರ್ತಾಜಾಸಾಬ್ ಗೋಲಂದಾಜ್ (38), ಇಳಕಲ್ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು ಬಂಧಿತರಲ್ಲಿ ಓರ್ವ ದಾವಣಗೆರೆ ನಿವಾಸಿಯಾಗಿದ್ದು, ಮತ್ತೋರ್ವ ಜಗಳೂರು. ಹಾಗೆಯೇ ಉಳಿದ ನಾಲ್ಕು ಜನ ಮೂಲತಃ ಹುಬ್ಬಳ್ಳಿಯವರೆಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಗಳನ್ನು ಬಂಧಿಸಿದ್ದೇ ರೋಚಕ : ಜುಲೈ 22ರ (ಶನಿವಾರ) ರಾತ್ರಿ ಜಗಳೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುವ ವೇಳೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಲಿಂಗಣ್ಣಹಳ್ಳಿ ರಸ್ತೆಯಲ್ಲಿ ತಡರಾತ್ರಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಲಿಂಗಣ್ಣಹಳ್ಳಿ ರಸ್ತೆಯ ಬದಿಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರಿನ ಬಳಿ ಇಬ್ಬರು ವ್ಯಕ್ತಿಗಳಿದ್ದನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು ಆ ಕಾರಿನ ಬಳಿ ತೆರಳಿದ್ದಾರೆ.
ಕಾರಿನ ಬಳಿ ನಿಂತಿದ್ದ ಇಬ್ಬರು ಪೊಲೀಸ್ ಜೀಪ್ ನೋಡಿ ಓಡಿಹೋದ್ರೆ, ಇನ್ನು ಅದೇ ಕಾರಿನಲ್ಲಿ ಮೂರ್ನಾಲ್ಕು ಜನ್ರಿದ್ದನ್ನು ಗಮನಿಸಿ ಪೊಲೀಸರು ಖದೀಮರನ್ನು ಹಿಡಿದಿಟ್ಟುಕೊಂಡಿದ್ರು. ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ಬೆನ್ನುಹತ್ತಿ ಹಿಡಿದ ಜಗಳೂರು ಪೊಲೀಸರು, ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತರನ್ನು ವಿಚಾರಣೆ ನಡೆಸಿದಾಗ ದರೋಡೆ ಮಾಡಲು ಹೊಂಚು ಹಾಕಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಇಲ್ಲಿಗೆ ಸುಮ್ಮನಾಗದ ಪೊಲೀಸರು ಠಾಣೆಗೆ ಕರೆತಂದು ಪಿಎಸ್‌ಐ ಸಾಗರ್ ಅವರು ಕೊಟ್ಟ ದೂರಿನ ಹಿನ್ನೆಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.