ದಾವಣಗೆರೆ: ವ್ಯಕ್ತಿಯೊಬ್ಬನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದ ರೌಡಿಶೀಟರ್ನನ್ನು ನಗರದ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಜಬೀ ಬಂಧಿತ ಆರೋಪಿ, ನಡು ರಸ್ತೆಯಲ್ಲೇ ಜಗಳವಾಡುತ್ತಿದ್ದವರನ್ನು, ಏಕೆ ರಸ್ತೆ ಬ್ಲಾಕ್ ಮಾಡಿ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದ ವ್ಯಕ್ತಿಗೆ ರೌಡಿಶೀಟರ್ ನಡು ರಸ್ತೆಯಲ್ಲೇ ಮನಬಂದಂತೆ ಥಳಿಸಿದ್ದ ಘಟನೆ 20 ದಿನಗಳ ಹಿಂದೆ ದಾವಣಗೆರೆ ನಗರದ ಎಸ್ ಎಸ್ ಲೇಔಟ್ನ ಒಳಾಂಗಣ ಕ್ರೀಡಾಂಗಣ ರಸ್ತೆಯಲ್ಲಿ ನಡೆದಿತ್ತು. ಘಟನೆಯಲ್ಲಿ ದಿಲೀಪ್ ಹಲ್ಲೆಗೊಳಗಾಗಿದ್ದರು.
ಬಂಧಿತ ಜಬೀ ಸಹಚರ ಮುತ್ತುರಾಜ್ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೆ ವಿದ್ಯಾನಗರ ಠಾಣೆಯ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆ ನಡೆಯುವುದಕ್ಕೂ ಮುನ್ನ ಆರೋಪಿ ಜಬೀ ಕಳೆದ ಎರಡು ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಈ ಹಿಂದೆ ದಾವಣಗೆರೆ ನಗರದ ಗ್ರೀನ್ ಪಾರ್ಕ್ ಹೋಟೆಲ್ನಲ್ಲಿ ಗಲಾಟೆ ಮಾಡಿದ್ದ ವಿಚಾರವಾಗಿ ಆರೋಪಿ ಜಬೀ ಜೈಲು ಸೇರಿದ್ದ. ತಪ್ಪನ್ನು ಪ್ರಶ್ನಿದ್ದ ವ್ಯಕ್ತಿ ಮೇಲೆ ನಡು ರಸ್ತೆಯಲ್ಲೇ ಹಲ್ಲೆ ಮಾಡಿದ್ದರಿಂದ ಸಾರ್ವಜನಿಕರು ರೌಡಿಗಳಿಂದ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಇನ್ನು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.