ಕರ್ನಾಟಕ

karnataka

ETV Bharat / state

ಹರಿಹರ ತಾಲೂಕಾಡಳಿತ ಜನರ ವಿಶ್ವಾಸ ಉಳಿಸಿಕೊಳ್ಳಲಿ; ಸದಸ್ಯ ವಸಂತ್ ಕುಮಾರ್ - Harihara latest news

ನಗರಸಭಾ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಕೋವಿಡ್-19 ಬಗ್ಗೆ ಸಭೆ ಆಯೋಜಿಸಲಾಗಿತ್ತು.

Meeting
Meeting

By

Published : Aug 5, 2020, 6:16 PM IST

ಹರಿಹರ :ಕೋವಿಡ್-19 ವೈರಸ್ ತಡೆಯುವಲ್ಲಿ ನಗರಸಭೆ ಸದಸ್ಯರ ಸಹಕಾರ ಕೇಳುವ ಮೊದಲು ತಾಲೂಕು ಆಡಳಿತದ ಅಧಿಕಾರಿಗಳು ಜನತೆಯ ವಿಶ್ವಾಸ ಉಳಿಸಿಕೊಳ್ಳಲಿ ಎಂದು ನಗರಸಭಾ ಸದಸ್ಯ ವಸಂತ್ ಕುಮಾರ್ ಹೇಳಿದರು.

ನಗರಸಭಾ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಕೋವಿಡ್-19 ಬಗ್ಗೆ ನಗರಸಭಾ ಸದಸ್ಯರ ಕುಂದು ಕೊರತೆಗಳ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಆಡಳಿತದವರು ಇಂದು ನಗರಸಭೆ ಸದಸ್ಯರ ಸಹಕಾರ ಕೇಳುತ್ತಿರುವಿರಿ. ಆದರೆ ಸಾರ್ವಜನಿಕರೇ ನಿಮ್ಮ ಅಧಿಕಾರಿಗಳ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಇತರ ಭಾಗಗಳಲ್ಲಿ ಹಾಗೂ ಜಿಲ್ಲಾ ಕೇಂದ್ರದಲ್ಲಿ ಗುಣಮುಖರಾಗಿ ಬಂದ ಸೋಂಕಿತರಿಗೆ ಪುಷ್ಪಮಳೆ ಗೈದು ಸನ್ಮಾನಿಸಲಾಗುತ್ತಿದೆ. ಆದರೆ ನಮ್ಮ ತಾಲ್ಲೂಕಿನಲ್ಲಿ ಈ ಸಂಪ್ರದಾಯ ಇಲ್ಲದಂತಾಗಿದೆ. ಸಾರ್ವಜನಿಕರು ಅಧಿಕಾರಿಗಳ ಇಂಥ ವರ್ತನೆಯಿಂದ ಬೇಸತ್ತು ಹೋಗಿದ್ದಾರೆ. ಎಲ್ಲದಕ್ಕೂ ಸರ್ಕಾರದ ಮಾರ್ಗಸೂಚಿಯಲ್ಲಿ ಅವಕಾಶವಿಲ್ಲ ಎಂದು ಹೇಳಿ ನುಣುಚಿಕೊಳ್ಳುವ ಪ್ರಕ್ರಿಯೆ ಅಧಿಕಾರಿಗಳಿಂದ ನಡೆಯುತ್ತಿದೆ ಎಂದರು.

ಮುಂದುವರಿದು ಮಾತನಾಡಿದ ಅವರು, ಕೋವಿಡ್ ರಕ್ಷಣಾ ಕೇಂದ್ರಗಳಲ್ಲಿ ವೈದ್ಯರು ಸೋಂಕಿತರಿಗೆ ಒಂದು ವಾರದ ಔಷಧಿ, ಮಾತ್ರೆಗಳನ್ನು ಮೊದಲೇ ನೀಡುತ್ತಿದ್ದಾರೆ ಎಂಬ ದೂರಿದ್ದು ಕೇವಲ ಒಬ್ಬ ಶುಶ್ರೂಷಕಿ ಮಾತ್ರ ಕರ್ತವ್ಯ ನಿರ್ವಹಿಸುತ್ತಾರೆ. ಅವರೂ ಸಹ ದಿನಕ್ಕೆ ಒಂದು ಬಾರಿ ಮಾತ್ರ ಸೋಂಕಿತರನ್ನು ಮಾತನಾಡಿಸಿ ಹೋಗುವುದನ್ನು ಬಿಟ್ಟರೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ನೀಡುತ್ತಿಲ್ಲ ಮತ್ತು ಪೌಷ್ಟಿಕಾಂಶವುಳ್ಳ ಆಹಾರವನ್ನು ಸಹ ಸರಿಯಾಗಿ ನೀಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ನೀವು ಸಮರೋಪಾದಿಯಲ್ಲಿ ನಡೆಯುತ್ತಿರುವ ವೈರಸ್ ನಿಯಂತ್ರಣ ಕಾರ್ಯದಲ್ಲಿ, ಸದಸ್ಯರಾದ ನೀವೇ ಸ್ವತಃ ತಹಶೀಲ್ದಾರ್ ಅಥವಾ ಅಧಿಕಾರಿಗಳೆಂದು ಭಾವಿಸಿ ಸಾರ್ವಜನಿಕರಿಗೆ ಧೈರ್ಯ ತುಂಬಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಗರಸಭೆ ಸದಸ್ಯರಾದ ಸಿದ್ದೇಶ್, ಪಿ.ಎನ್. ವಿರುಪಾಕ್ಷ, ಎಂ.ಎಸ್. ಬಾಬು ಲಾಲ್, ಮಹಬೂಬ್ ಬಾಷಾ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details