ದಾವಣಗೆರೆ : 1989ರಲ್ಲಿ ಅಂದಿನ ಸರ್ಕಾರ ಹರಿಹರ ತಾಲೂಕಿನ ಮಳಲಹಳ್ಳಿ ಗ್ರಾಮಕ್ಕೆ ಜನತಾ ಮನೆಗಳನ್ನು ಹಕ್ಕು ಪತ್ರಗಳ ಸಹಿತ ಮಂಜೂರು ಮಾಡಿತ್ತು. ಸರ್ಕಾರ ಒಂದು ಎಕರೆ ಜಮೀನು ಖರೀದಿ ಮಾಡಿ ಮನೆಗಳನ್ನು ನಿರ್ಮಿಸುವ ಪ್ಲಾನ್ ಮಾಡಿತ್ತು.
ಅಲ್ಲಿನ ಜನ ತಮ್ಮ ಸ್ವಂತ ಖರ್ಚಿನಲ್ಲಿ ಉಳಿದವರು ಸರ್ಕಾರಿ ವಸತಿ ಯೋಜನೆ ಅಡಿ ಮನೆ ನಿರ್ಮಿಸಿಕೊಂಡು ಜೀವಿಸುತ್ತಿದ್ದರು. ಆದರೆ, ಜಮೀನಿನ ಮಾಲೀಕನ ತಕರಾರಿಂದ ಈ ಕುಟುಂಬಗಳು ಇಂದು ಬೀದಿಗೆ ಬಿದ್ದಿವೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಳಲಹಳ್ಳಿ ಗ್ರಾಮದ ಬಡಕುಟುಂಬಗಳು ಬೀದಿಗೆ ಬಿದ್ದಿವೆ. ಕೋರ್ಟಿನ ಒಂದು ಆದೇಶದಿಂದ ಇದ್ದಕ್ಕಿದ್ದಂತೆ ನ್ಯಾಯಾಲಯದ ಅಮೀನರು ಪೊಲೀಸರ ಮೂಲಕ ಮನೆಗಳನ್ನು ಖಾಲಿ ಮಾಡಿಸಿದ್ದಾರೆ. ಆದರೆ, ಆ ಬಡಕುಟುಂಬಗಳು ಇದೀಗ ರಸ್ತೆಯಲ್ಲೇ ತಾತ್ಕಾಲಿಕ ಗುಡಿಸಲುಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ.
ಜನತಾ ಮನೆಗಳನ್ನು ಖಾಲಿ ಮಾಡುವಂತೆ ಕೋರ್ಟ್ ಆದೇಶ.. ಮಳಲಹಳ್ಳಿ ಗ್ರಾಮದಲ್ಲಿ ಸುಮಾರು 35 ವರ್ಷಗಳ ಹಿಂದೆ ಅಂದರೆ 1989ರಲ್ಲಿ ಓಂಕಾರಪ್ಪ ಎಂಬುವರ ಒಂದು ಎಕರೆ ಜಮೀನಿನಲ್ಲಿ ಸರ್ಕಾರ ಸೂರು ರಹಿತ 35ಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿತ್ತು. ಅದರಲ್ಲಿ ಹಲವರು ತಮ್ಮ ಸ್ವಂತ ಖರ್ಚಿನಲ್ಲಿ ಉಳಿದವರು ಸರ್ಕಾರಿ ವಸತಿ ಯೋಜನೆ ಅಡಿ ಮನೆ ನಿರ್ಮಿಸಿಕೊಂಡು 35 ವರ್ಷಗಳ ಕಾಲ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದರು.
ಆದರೆ, ಮಾಲೀಕ ಓಂಕಾರಪ್ಪನವರು ಮಾತ್ರ ಸರ್ಕಾರಕ್ಕೆ ನೀಡಿದ ಜಮೀನಿಗಿಂತ ಹೆಚ್ಚು ಜಮೀನನ್ನು ಜನ ಒತ್ತುವರಿ ಮಾಡಿಕೊಂಡು ಕೆಲವರು ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ಗ್ರಾಪಂ ಹಾಗೂ ಸರ್ಕಾರಿ ಅಧಿಕಾರಿಗಳು ಸೂಕ್ತವಾಗಿ ಕೋರ್ಟ್ ಕಲಾಪಗಳಿಗೆ ಹಾಜರಾಗದೆ, ಸರಿಯಾಗಿ ಸ್ಪಂದಿಸದ ಹಿನ್ನೆಲೆ, ಕೋರ್ಟ್ ಅನಧಿಕೃತ ಮನೆಗಳ ತೆರವಿಗೆ ಆದೇಶ ನೀಡಿದ ಬೆನ್ನಲ್ಲೇ ಇಂದು ಅಮೀನರು ಮನೆಗಳನ್ನು ಖಾಲಿ ಮಾಡಿಸಿ ಬೀಗ ಜಡಿದು ಕಾನೂನಿನ ಪ್ರಕಾರ ಮನೆ ಬೀಗಗಳನ್ನು ಓಂಕಾರಪ್ಪನವರಿಗೆ ಹಸ್ತಾಂತರ ಮಾಡಿದ್ದಾರೆ.
ಮನೆ ತೆರವಿನ ಹಿನ್ನೆಲೆ ಸೂರು ಕಳೆದುಕೊಳ್ಳುವ ಭೀತಿಯಲ್ಲಿದ್ದ ಜನರು ರಸ್ತೆಯಲ್ಲೇ ತಾತ್ಕಾಲಿಕ ಟೆಂಟ್, ಗುಡಿಸಲು ನಿರ್ಮಿಸಿಕೊಂಡಿದ್ದರು. ಮನೆ ತೆರವಿಗೆ ಬಂದ ಕೋರ್ಟ್ ಅಧಿಕಾರಿಗಳೊಂದಿಗೆ ಅಲ್ಲಿನ ನಿವಾಸಿಗಳು ವಾಗ್ವಾದ ನಡೆಸಿ ವಿಷ ಸೇವಿಸಲು ಮುಂದಾಗಿದ್ದಾರೆ. ಬಳಿಕ ನಿವಾಸಿಗಳ ಮನವೊಲಿಸಿ ಕೋರ್ಟ್‌ನ ಆದೇಶಕ್ಕೆ ಮಣಿದು ಮನೆಯಲ್ಲಿದ್ದ ಸಾಮಗ್ರಿಗಳನ್ನು ಹೊರಗೆ ಜೋಡಿಸಿಕೊಳ್ಳತೊಡಗಿದರು.
ಘಟನಾ ಸ್ಥಳಕ್ಕೆ ಆಗಮಿಸಿ ಶಾಸಕ ಎಸ್. ರಾಮಪ್ಪ, ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಓಂಕಾರಪ್ಪನವರ ಜತೆ ಚರ್ಚೆ ನಡೆಸಲಾಯಿತು. ಸೂರು ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬಗಳಿಗೂ ಅಂದಿನ ಸರ್ಕಾರ ನೀಡಿದ್ದ ಅದೇ ಮಾದರಿಯಲ್ಲಿ ವಸತಿ ಸಚಿವ ಸೋಮಣ್ಣನವರ ಬಳಿ ಚರ್ಚಿಸಿ ಸೂರು ಕಲ್ಪಿಸುವುದಾಗಿ ಶಾಸಕ ಎಸ್ ರಾಮಪ್ಪ ಭರವಸೆ ನೀಡಿದ್ದಾರೆ.
ಶಾಸಕ ಎಸ್. ರಾಮಪ್ಪ ಮಧ್ಯ ಪ್ರವೇಶದಿಂದ ಕೋರ್ಟ್‌ನ ಆದೇಶ ಪಾಲನೆಗೆ ಇದ್ದ ಸಾರ್ವಜನಿಕರ ವಿರೋಧವು ಶಮನವಾಗಿದೆ. ಸರ್ಕಾರ ಹಾಗೂ ಗ್ರಾಪಂ ಅಧಿಕಾರಿಗಳ ಎಡವಟ್ಟಿನಿಂದ ಜನತಾ ಮನೆಗಳನ್ನು ಪಡೆದಿದ್ದ ಫಲಾನುಭವಿಗಳು ಇದೀಗ ಬೀದಿಪಾಲಾಗಿದ್ದಾರೆ. ಸದ್ಯ ರಸ್ತೆಯಲ್ಲೇ ಗುಡಿಸಲು ಹಾಕಿಕೊಂಡಿರುವ ಜನರು ಮನೆಗಾಗಿ ಪಟ್ಟು ಹಿಡಿದಿದ್ದಾರೆ.
ಓದಿ :ಎನ್ಸಿಸಿ ಕೆಡೆಟ್ಗಳನ್ನು ಅಭಿನಂದಿಸಿದ ಸಿಎಂ ಬಸವರಾಜ ಬೊಮ್ಮಾಯಿ