ದಾವಣಗೆರೆ:ನಗರದ ರೈಸ್ ಮಿಲ್ನಲ್ಲಿ ವನ್ಯಜೀವಿಗಳು ಪತ್ತೆ ಪ್ರಕರಣ ಸಂಬಂಧಿಸಿದಂತೆ ಮಾಜಿ ಸಚಿವರೊಬ್ಬರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗಳಾದ ಕರಿಬಸವಯ್ಯ, ಸಂಪಣ್ಣ, ಸೆಂಥಿಲ್ಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದೆ.
ಈ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ಮಾಜಿ ಸಚಿವರು ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಜನವರಿ 2ಕ್ಕೆ ಮುಂದೂಡಿದೆ. ಮಾಜಿ ಸಚಿವರ ಪರ ನ್ಯಾಯವಾದಿ ಪ್ರಕಾಶ ಪಾಟೀಲ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ರೈಸ್ ಮಿಲ್ನಲ್ಲಿ ಪ್ರಾಣಿಗಳು:ಡಿಸೆಂಬರ್ 21ರಂದು ಮಾಜಿ ಸಚಿವರ ಒಡೆತನದ ಮಿಲ್ ಹಿಂಭಾಗದ ಫಾರ್ಮ್ ಹೌಸ್‌ನಲ್ಲಿ 11 ಕೃಷ್ಣಮೃಗ, 7 ಜಿಂಕೆಗಳು, 7 ಕಾಡುಹಂದಿ, 3 ಮುಂಗುಸಿ ಹಾಗೂ 2 ನರಿಗಳು ಪತ್ತೆಯಾಗಿದ್ದವು. ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಈ ಎಲ್ಲ ವನ್ಯಜೀವಿಗಳನ್ನು ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದರು. ವನ್ಯಜೀವಿಗಳನ್ನು ಆನಗೋಡಿನ ಕಿರುಪ್ರಾಣಿ ಸಂಗ್ರಹಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ.