ದಾವಣಗೆರೆ: ಸ್ವಾಮಿ ಕಾರ್ಯ ಸ್ವಕಾರ್ಯ ಎಂಬ ಗಾದೆ ಮಾತಿದೆ. ಈ ಮಾತು ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯಗೆ ಹೇಳಿ ಮಾಡಿಸಿದಂತಿದೆ. ಯಾಕಂದ್ರೆ, ರೇಣುಕಾಚಾರ್ಯ ತಮ್ಮ ಸ್ವಂತ 30 ಎಕರೆ ಜಮೀನಿಗೆ ಸರ್ಕಾರದ ವಿವಿಧ ಯೋಜನೆಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಬಳಸಿಕೊಂಡು ಬಾಳೆ, ಅಡಿಕೆ ಬೆಳೆ ಬೆಳೆದಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಶಾಂತನಗೌಡ ಆರೋಪಗಳ ಸುರಿಮಳೆ ಗೈದಿದ್ದಾರೆ.
ಹೌದು, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನ್ಯಾಮತಿ ರಸ್ತೆಯಲ್ಲಿ ಪಂಚ ಕಮಲ ಎಂಬ ಹೆಸರಿನ ಮನೆ ಕಟ್ಟುತ್ತಿದ್ದಾರೆ. ಮನೆ ಜೊತೆಗೆ 30 ಎಕರೆ ಜಮೀನು ಕೂಡ ಖರೀದಿಸಿದ್ದಾರೆ ಎಂಬ ಆರೋಪವನ್ನು ಮಾಜಿ ಶಾಸಕರು ಮಾಡಿದ್ದಾರೆ.
ಇದನ್ನೂ ಓದಿ:ಪರಿಹಾರದ ವಿಚಾರವಾಗಿ ತಾರತಮ್ಯ: ಹಾಲಿ ಮಾಜಿ ಶಾಸಕರ ಜಟಾಪಟಿ!
ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಬಳಿ ರೇಣುಕಾಚಾರ್ಯ ಒಡೆತನದ ಬಾಳೆ ತೋಟವಿದ್ದು, ಜಮೀನು ಸಾಗುವಳಿಗೆ ಮಾಡಿದ ಮಾಸ್ಟರ್ ಪ್ಲಾನ್ ಮಾತ್ರ ಭಯಾನಕವಾಗಿದೆ. ನೇರಲಗುಂಡಿ ಗ್ರಾಮದ ಕೆರೆ ಹೂಳೆತ್ತಲು 55 ಲಕ್ಷ ರೂಪಾಯಿ ಸರ್ಕಾರಿ ಅನುದಾನ ಬಿಡುಗಡೆ ಮಾಡಿಸಿ, ಅ ಕೆರೆಯಿಂದ ಹೂಳು ತೆಗೆದ ಮಣ್ಣನ್ನೆಲ್ಲಾ ತಮ್ಮ ಜಮೀನಿಗೆ ಅಂದ್ರೆ, ಈ ಬಾಳೆ ತೋಟಕ್ಕೆ ಹಾಕಿಸಿಕೊಂಡಿದ್ದಾರೆ. ಜೊತೆಗೆ ಜಾನುವಾರುಗಳಿಗೆ ಕುಡಿಯುವ ನೀರು ಎಂಬ ಯೋಜನೆ ಆರಂಭಿಸಿ, 4.18 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಸಿಮೆಂಟ್ ಗೋಕಟ್ಟೆ ಕಟ್ಟಿಸಿ ಜಮೀನಿಗೆ ದಾರಿ ಮಾಡಿಕೊಂಡಿದ್ದಾರೆ. ಕುಡಿಯುವ ನೀರಿಗಾಗಿ ಬಿಡುಗಡೆಯಾದ 18.17 ಲಕ್ಷ ರೂ. ಮೌಲ್ಯದಲ್ಲಿ ತಮ್ಮ ಜಮೀನಿನವರೆಗೆ ವಿದ್ಯುತ್ ಕಂಬಗಳನ್ನು ಹಾಕಿಸಿದ್ದಾರೆ. ಒಟ್ಟಾರೆ ಬಿಡುಗಡೆಯಾದ ಬರೋಬ್ಬರಿ 72.18 ಲಕ್ಷ ರೂಪಾಯಿ ಸರ್ಕಾರಿ ಅನುದಾನವನ್ನು ತಮ್ಮ ಸ್ವಂತ ಜಮೀನು ಉದ್ಧಾರಕ್ಕಾಗಿ ಉಪಯೋಗ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಡಿ ಜಿ ಶಾಂತನಗೌಡ ಆರೋಪಿಸಿದ್ದಾರೆ.
ಎಂ ಪಿ ರೇಣುಕಾಚಾರ್ಯ ವಿರುದ್ಧ ಭ್ರಷ್ಟಾಚಾರ ಆರೋಪ ಇದನ್ನೂ ಓದಿ:ಮಳೆಯಿಂದ ಮನೆ ಹಾನಿ: ಪರಿಹಾರ ನೀಡುವ ವಿಚಾರಕ್ಕೆ ಹಾಲಿ, ಮಾಜಿ ಶಾಸಕರ ಕಿತ್ತಾಟ
ಶಾಸಕ ರೇಣುಕಾಚಾರ್ಯ ತಿರುಗೇಟು.. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ಇನ್ನೊಂದೆಡೆ, ಇಂತಹ ಆರೋಪಗಳಿಗೆ ಅದೇ ರಾಗ ಅದೇ ಹಾಡು ಎನ್ನುವಂತೆ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ ಅವರು, ಶಾಂತನಗೌಡ ಅವರಿಗೆ ನಾಚಿಕೆ ಆಗ್ಬೇಕು. ಅವರು ಅಧಿಕಾರದಲ್ಲಿದ್ದಾಗ ಅನುದಾನ ತರಲಾಗಲಿಲ್ಲ, ಈಗ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಸಚಿವನಾಗಿ ಕ್ಷೇತ್ರವನ್ನು ಕಳೆದುಕೊಂಡಿದ್ದೆ, ಶಾಸಕನಾಗಿಯೇ ಮುಂದುವರಿಯುವೆ: ರೇಣುಕಾಚಾರ್ಯ