ದಾವಣಗೆರೆ : ರಾಗಿ ಖರೀದಿ ಕೇಂದ್ರದಲ್ಲಿ ರೈತರು ಮಾತ್ರ ರಾಗಿ ಮಾರಾಟ ಮಾಡುವ ನಿಯಮವನ್ನು ಸರ್ಕಾರ ಮಾಡಿದೆ. ಆದರೆ ಕೆಲವರು ಮೈಸೂರಿನಿಂದ ರಾಗಿ ತಂದು ಜಗಳೂರು ರಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ ಅಕ್ರಮ ಎಸಗುತ್ತಿದ್ದಾರೆ ಎಂದು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಆರೋಪಿಸಿದ್ದಾರೆ. ಇನ್ನೊಂದೆಡೆ, ರೈತರ ಹೆಸರಿನಲ್ಲಿ ಅವ್ಯವಹಾರ ಎಸಗಿರುವವರ ವಿರುದ್ಧ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಕಳೆದ ಐದು ತಿಂಗಳ ಹಿಂದೆ ಖರೀದಿ ಕೇಂದ್ರಕ್ಕೆ ರೈತರು ರಾಗಿ ಹಾಕಿದ್ದರು. ಪ್ರತಿ ರೈತರಿಂದ 20 ಕ್ವಿಂಟಲ್ ಖರೀದಿ ಮಾಡಲಾಗಿತ್ತು. ಒಂದು ಕ್ವಿಂಟಲ್‌ಗೆ 3,780 ರೂಪಾಯಿ ದರ ನಿಗದಿ ಮಾಡಲಾಗಿತ್ತು. ಕೆಲವರು 1,500ರಿಂದ 2,000 ರೂಪಾಯಿಗೆ ಮೈಸೂರು ಭಾಗದಿಂದ ರಾಗಿ ಖರೀದಿಸಿ ತಂದು ಕೇಂದ್ರಕ್ಕೆ ಹಾಕಿ ವಂಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ತನಿಖೆ ನಡೆಸಲು ಆಹಾರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಆದೇಶಿಸಿದ್ದಾರೆ.
ಖರೀದಿ ಕೇಂದ್ರದ ಡೇಟಾ ಎಂಟ್ರಿ ಆಪರೇಟರ್ ಗಿರೀಶ್ ಹಾಗು ನವೀನ್ ಇಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರ್ಕಾರದ ಸೂಚನೆ ನೀಡಿದೆ. ಅಂದಿನ ಖರೀದಿ ಕೇಂದ್ರದ ವ್ಯವಸ್ಥಾಪಕರಾಗಿದ್ದ ಶಂಕರ್ ಸಾವನ್ನಪ್ಪಿರುವುದರಿಂದ ಕುಟುಂಬಕ್ಕೆ ಸರ್ಕಾರದ ಸೌಲಭ್ಯ ತಡೆ ಹಿಡಿಯಲು ನಿರ್ದೇಶನ ನೀಡಲಾಗಿದೆ.
ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಪ್ರತಿಕ್ರಿಯಿಸಿ, "ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ ನಡೆದಿರುವುದು ಸತ್ಯ. ಇದಕ್ಕೆ ಕಾರಣಕರ್ತರು ಅಧಿಕಾರಿಗಳೋ ರೈತರೋ ಗೊತ್ತಿಲ್ಲ. ಆರೇಳು ತಿಂಗಳುಗಳಿಂದ ಸರ್ಕಾರ ಮತ್ತು ರೈತರ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಪಾಣಿಗಳನ್ನು ಪರಿಶೀಲನೆ ಮಾಡಿದಾಗ ಜಗಳೂರು ತಾಲೂಕಿನ ರೈತರು ಯಾರು, ಬೇರೆಯವರು ಯಾರು ಎಂಬುದು ತಿಳಿದುಬಂದಿದೆ."