ಹರಿಹರ: ಹೊರ ರಾಜ್ಯ ಮತ್ತು ಬೆಂಗಳೂರಿನಿಂದ ಕೆಲ ವ್ಯಕ್ತಿಗಳು ತಾಲೂಕಿನ ವಾಸನ ಗ್ರಾಮಕ್ಕೆ ಆಗಮಿಸಿದ್ದು, ಅವರಿಗೆ ಕೊರೊನಾ ಇರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ ಗ್ರಾಮಸ್ಥರು.
ಇತ್ತೀಚೆಗೆ ಕೇರಳದಿಂದ ವ್ಯಕ್ತಿಯೊಬ್ಬ ಗ್ರಾಮಕ್ಕೆ ಆಗಮಿಸಿದ್ದು, ಆತನಿಗೆ ಕೊರೊನಾ ಸೋಂಕು ತಗುಲಿರಬಹುದೆಂದು ಶಂಕೆ ವ್ಯಕ್ತಪಡಿಸಿದ ಗ್ರಾಮಸ್ಥರು ಆತನನ್ನು ಪ್ರತ್ಯೇಕವಾಗಿರಿಸಿದ್ದಾರೆ. ಈ ವಿಷಯ ತಿಳಿದು ತಕ್ಷಣ ಕಾರ್ಯಪ್ರವೃತ್ತರಾದ ತಾಲೂಕು ಆರೋಗ್ಯಾಧಿಕಾರಿ ಚಂದ್ರಮೋಹನ್ ಅವರು ತಮ್ಮ ಸಿಬ್ಬಂದಿಗೆ ದೂರವಾಣಿ ಮೂಲಕ ಕರೆ ಮಾಡಿ ತಕ್ಷಣ ವಾಸನ ಗ್ರಾಮಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿ ಅರಿತು ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಹೀಗಾಗಿ ಸಿಬ್ಬಂದಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರನ್ನು ಭೇಟಿಯಾಗಿ ಮಾತಕತೆ ನಡೆಸಿದರು. ಶಂಕಿತ ವ್ಯಕ್ತಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಕೊರೊನಾ ಇಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಹೀಗಾಗಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.