ದಾವಣಗೆರೆ:ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದ್ದ ಮಹಾಮಾರಿ ಕೊರೊನಾ ಈಗ ಸ್ವಲ್ಪಮಟ್ಟಿಗೆ ಹತೋಟಿಗೆ ಬಂದಿದೆ. ಕಳೆದ ಎರಡು ತಿಂಗಳ ಹಿಂದೆ ಸೋಂಕಿನ ಆರ್ಭಟ ಹೆಚ್ಚಾಗಿತ್ತು. ಆದರೆ ಈಗ ಹಾವಳಿ ಕಡಿಮೆಯಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಪಟ್ಟ ಶ್ರಮ ಯಶಸ್ವಿಯಾಗಿದೆ.
ಬೆಣ್ಣೆನಗರಿಯಲ್ಲಿ ತಗ್ಗಿದ ಸೋಂಕಿನ ಭೀತಿ: ಕೊರೊನಾ ಮುಕ್ತ ಜಿಲ್ಲೆಯತ್ತ ನಗರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 227ಕ್ಕೇ ಏರಿದ್ದರೂ, ಈಗಾಗಲೇ 205 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೇವಲ 16 ಮಾತ್ರ ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಇನ್ನು ಕೆಲವರು ಗುಣಮುಖರಾಗಲಿದ್ದು, ಕಳೆದ ಮೂರು ದಿನಗಳಲ್ಲಿ ಕೇವಲ 2 ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಬೇರೆಡೆ ಬಂದವರ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ಆದರೆ ಬೇರೆ ರಾಜ್ಯಗಳಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದ್ದರೂ ಅದು ಕಡಿಮೆ.
ಎರಡೂವರೆ ತಿಂಗಳು, 8 ತಿಂಗಳ ಮಕ್ಕಳು ಗುಣಮುಖ:ದಾವಣಗೆರೆಯಲ್ಲಿ 8 ತಿಂಗಳ ಇಬ್ಬರು ಮಕ್ಕಳಿಗೆ ಹಾಗೂ ಎರಡೂವರೆ ತಿಂಗಳ ಮಗುವಿನಲ್ಲಿ ಕೊರೊನಾ ವಕ್ಕರಿಸಿದಾಗ ಆತಂಕಕ್ಕೆ ಕಾರಣವಾಗಿತ್ತು. ಆದ್ರೀಗ ಈ ಪುಟ್ಟ ಮಕ್ಕಳು ಮಹಾಮಾರಿ ಸೋಂಕಿನ ವಿರುದ್ಧ ಹೋರಾಡಿ ಗೆದ್ದು ಬಂದಿದ್ದು, ನಿಜಕ್ಕೂ ವಿಶೇಷವೇ.
ಇನ್ನು ಈ ಮಕ್ಕಳಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ದಾದಿಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಸಹ ಅಭಿನಂದನೆ ಸಲ್ಲಿಸಿದ್ದರು. ಇನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಸ್ವಾಮಿ ಹಾಗೂ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ರಾಘವನ್ ಹಗಲಿರುಳು ಶ್ರಮಿಸಿದ್ದಾರೆ.
ಇನ್ನು ಪೊಲೀಸ್ ಇಲಾಖೆಯ ಸಿಬ್ಬಂದಿ ಸಹ ಹಗಲಿರುಳು ಶ್ರಮಿಸಿದ ಪರಿಣಾಮ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳಕ್ಕೆ ತಡೆ ಬಿದ್ದಿದೆ. ಕೊರೊನಾ ಸೋಂಕು ಹೆಚ್ಚಾಗಿ ಹರಡಿರುವುದು ಜಾಲಿನಗರದಲ್ಲಿ. 69 ವರ್ಷದ ವೃದ್ಧ ಕೊರೊನಾಕ್ಕೆ ಬಲಿಯಾದ ಜಿಲ್ಲೆಯ ಮೊದಲ ವ್ಯಕ್ತಿ.
ಇವರು ವಾಸವಿದ್ದ ಈ ಪ್ರದೇಶ ಒಂದರಲ್ಲಿಯೇ ನೂರಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಇಮಾಮ್ ನಗರ, ಬಾಷಾನಗರ, ಬೇತೂರಿನಲ್ಲಿಯೂ ಸೋಂಕು ಹಬ್ಬಿತ್ತು. ಉಳಿದಂತೆ ಅಲ್ಲೊಂದು ಇಲ್ಲೊಂದು ಪ್ರಕರಣಗಳು ವರದಿಯಾಗಿದ್ದವು. ಒಟ್ಟಿನಲ್ಲಿ ಕೊರೊನಾ ಎಂಬ ಹೆಮ್ಮಾರಿ ಸದ್ಯ ನಿಯಂತ್ರಣಕ್ಕೆ ಬಂದಿದ್ದು, ಇದು ಹೀಗೆಯೇ ಮುಂದುವರಿಯಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ. ಜೊತೆಗೆ ಜಿಲ್ಲಾಡಳಿತದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.