ದಾವಣಗೆರೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರ ಗನ್ಮ್ಯಾನ್ಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದು ಬಂದಿದ್ದು, ಎಸ್ಪಿ ಕಚೇರಿ ಸೀಲ್ಡೌನ್ ಮಾಡುವ ಸಾಧ್ಯತೆ ಇದೆ. ಜುಲೈ 20 ರಂದು ಗನ್ಮ್ಯಾನ್ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.
ಆದರೆ ನಿನ್ನೆ ರಾತ್ರಿ ವರದಿ ಬಂದಿದ್ದು, ಪೊಲೀಸ್ ಕಾನ್ಸ್ಟೇಬಲ್ಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಸೋಂಕಿನ ಲಕ್ಷಣ ಇದ್ದ ಕಾರಣ ಕೆಲ ದಿನಗಳಿಂದ ಕಚೇರಿಗೆ ಬಂದಿರಲಿಲ್ಲ. ಕನಿಷ್ಠ 48 ಗಂಟೆಯಾದರೂ ಎಸ್ಪಿ ಕಚೇರಿ ಸೀಲ್ಡೌನ್ ಮಾಡುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಜಿಲ್ಲಾ ಕೋವಿಡ್ ಆಸ್ಪತ್ರೆಯ ನಾಲ್ವರು ಸಿಬ್ಬಂದಿಗೆ ಸೋಂಕು ತಗುಲಿದ್ದು, ಕೊರೊನಾ ವಾರಿಯರ್ಸ್ಗಳಿಗೂ ಆತಂಕ ಶುರುವಾಗಿದೆ. ಸಂಪರ್ಕದಲ್ಲಿದ್ದ 20 ಕ್ಕೂ ಹೆಚ್ಚು ಜನರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಸಿಬ್ಬಂದಿ ಕೊರತೆಯಾಗುವ ಆತಂಕವೂ ಕಾಡಲಾರಂಭಿಸಿದೆ.