ದಾವಣಗೆರೆ:ಪಾಪಿ ತಾತನೋರ್ವ ಹಣದಾಸೆಗೆ ತನ್ನ ಸ್ವಂತ ಮೊಮ್ಮಗನನ್ನೇ ಮಾರಾಟ ಮಾಡಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ದಾವಣಗೆರೆ ನಗರದ ನಾಗಮ್ಮಕೇಶವಮೂರ್ತಿ ಬಡಾವಣೆಯ ನಿವಾಸಿ ಬಸಪ್ಪ ಮಗು ಮಾರಾಟ ಮಾಡಿದ ಅಜ್ಜ. ಪ್ರಕರಣ ನಡೆದ 24 ಗಂಟೆಯಲ್ಲೇ ದಾವಣಗೆರೆ ಮಹಿಳಾ ಠಾಣೆಯ ಪೊಲೀಸರು ಮಗುವನ್ನು ಪತ್ತೆ ಹಚ್ಚಿ ತಾಯಿ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಬಸಪ್ಪ ತನ್ನ ಮಗಳು ಸುಜಾತಾಳ 2ನೇ ಗಂಡು ಮಗುವನ್ನೂ ಮಾರಾಟ ಮಾಡಿದ್ದನಂತೆ. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಮಗುವನ್ನು ಹಣದಾಸೆಗೆ ಸೇಲ್ ಮಾಡಿದ್ದಾನೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ನವಲೆ ಗ್ರಾಮದ ಹಾಲಪ್ಪ, ಬೀಮವ್ವ ಎನ್ನುವ ದಂಪತಿಗೆ ಬಸಪ್ಪ ಮಗು ಮಾರಾಟ ಮಾಡಿದ್ದ. ಮಕ್ಕಳಿಲ್ಲದ ಕಾರಣ ಸಾಕಿಕೊಳ್ಳಲು ಮಗುವನ್ನು ಈ ದಂಪತಿ ಪಡೆದಿದ್ದರು.