ದಾವಣಗೆರೆ :ಗೋಮಾಳ ಸ್ಥಳದಲ್ಲಿ ಸೇವಾಲಾಲ್ ದೇವಸ್ಥಾನ ನಿರ್ಮಾಣ ಮಾಡಿದ್ದರಿಂದ ಬಂಜಾರ ಸಮಾಜ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.
ಗೋಮಾಳ ಸ್ಥಳದಲ್ಲಿ ಸೇವಾಲಾಲ್ ದೇವಸ್ಥಾನ ನಿರ್ಮಾಣ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಸೇವಾ ಲಾಲ್ ದೇವಸ್ಥಾನ ನಿರ್ಮಾಣ ಮಾಡಲು ಬಂಜಾರ (ಲಂಬಾಣಿ) ಸಮಾಜದವರು ರಾತ್ರೋರಾತ್ರಿ ಅಡಿಪಾಯ ಹಾಕಿದ್ದಾರೆ.
ಗ್ರಾಮದಲ್ಲಿ ರಾಜೀ ಪಂಚಾಯತ್ ಇಲ್ಲದೆ ರಾತ್ರೋರಾತ್ರಿ ಅಡಿಪಾಯ ಹಾಕಿದ್ದರಿಂದ ಆಕ್ರೋಶಿತರಾದ ಗ್ರಾಮದ ಕೆಲವರು ಸೇವಾಲಾಲ್ ದೇವಸ್ಥಾನ ನಿರ್ಮಾಣಕ್ಕೆ ಹಾಕಿದ್ದ ಅಡಿಪಾಯ ನಾಶ ಮಾಡಿರುವ ಘಟನೆ ನಡೆದಿದೆ.
ಈ ವಿಚಾರಕ್ಕೆ ಬಂಜಾರ ಸಮುದಾಯ ಹಾಗೂ ಗ್ರಾಮಸ್ಥರ ನಡುವೆ ಆರಂಭವಾದ ವಿವಾದ ಬಂಜಾರ ಸಮಾಜ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಇನ್ನು, ವಾಗ್ವಾದ ಗಲಾಟೆಗೆ ತಿರುಗುವ ಮುನ್ನವೇ ಘಟನ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹಾಗೂ ರೈತ ಮುಖಂಡ ತೇಜಸ್ವಿ ಪಟೇಲ್ ಭೇಟಿ ನೀಡಿದರು. ಗ್ರಾಮಸ್ಥರ ಜತೆ ಮಾತುಕತೆ ನಡೆಸಿ ಸಂಧಾನ ಮಾಡಲಾಯಿತು.
ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಅರೇಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಘಟನಾ ಸ್ಥಳಕ್ಕೆ ಬೀಡುಬಿಟ್ಟಿದ್ದರಿಂದ ಗಲಾಟೆ ತಣ್ಣಗಾಯಿತು.