ದಾವಣಗೆರೆ: ನಗರದಲ್ಲಿ ಐದು ಅಂತಸ್ತಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ತಲೆ ಎತ್ತುತ್ತಿದೆ. ಸ್ಮಾರ್ಟ್ ಸಿಟಿಯಡಿ ನಿರ್ಮಾಣಗೊಳ್ಳುತ್ತಿರುವ ನಿಲ್ದಾಣಕ್ಕೆ ಹೈಟೆಕ್ ಟಚ್ ನೀಡಲಾಗುತ್ತಿದೆ. ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಇದೇ ಡಿಸೆಂಬರ್ ವೇಳೆಗೆ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ನಿಲ್ದಾಣದ ಹಿಂಭಾಗದಲ್ಲಿ ದೈತ್ಯಾಕಾರದ ಕಮಾನುಗಳು ಪ್ರಯಾಣಿಕರನ್ನು ಸ್ವಾಗತ ಮಾಡಲಿವೆ. ಜತೆಗೆ ಒಮ್ಮೆಯೇ 46ಬಸ್ಗಳು ನಿಲ್ಲುವ ಫ್ಲಾಟ್ ಫಾರ್ಮ್ಗಳನ್ನು ನಿರ್ಮಾಣ ಮಾಡಿರುವುದು ವಿಶೇಷ.
ಹೌದು, ದಾವಣಗೆರೆಯ ಹೃದಯ ಭಾಗದಲ್ಲಿ ನಿರ್ಮಾಣ ಆಗುತ್ತಿರುವ ಬೃಹತ್ ಬಸ್ ನಿಲ್ದಾಣ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ. ಹಳೇ ಬಸ್ ನಿಲ್ದಾಣವನ್ನು ನೆಲಸಮ ಮಾಡುವ ಮೂಲಕ ಐದಂತಸ್ತಿನ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ. 120 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು, ಸ್ಮಾರ್ಟ್ ಸಿಟಿಯಿಂದ 90 ಕೋಟಿ ಅನುದಾನ ಹಾಗು ಕೆಎಸ್ಆರ್ಟಿಸಿ ನಿಗಮದಿಂದ 30 ಕೋಟಿ ಅನುದಾನವನ್ನು ಕಾಮಗಾರಿಗೆ ವ್ಯಯಿಸಲಾಗಿದೆ.
09 ಎಕರೆ ಪ್ರದೇಶದಲ್ಲಿ ಈ ಬಸ್ ನಿಲ್ದಾಣ ಸಿದ್ದಗೊಳ್ಳುತ್ತಿದ್ದು, ಇದರಲ್ಲಿ ಎರಡು ಮಾಲ್, 03 ಸಿನಿಮಾ ಮಂದಿರ, ಹಾಗು ಆರು ಲಿಫ್ಟ್ ಸೇರಿದಂತೆ ಎರಡು ಎಕ್ಸ್ಲೇಟರ್ ವ್ಯವಸ್ಥೆ ಮಾಡಲಾಗಿದೆ. ಮುಖ್ಯವಾಗಿ ಈ ಬಸ್ ನಿಲ್ದಾಣದಲ್ಲಿ 46 ಬಸ್ಗಳು ಒಂದೇ ಬಾರಿಗೆ ನಿಲ್ಲಬಹುದಾಗಿದೆ. ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಲು ಪ್ರತ್ಯೆಕ ಕೋಣೆಗಳ ವ್ಯವಸ್ಥೆ ಇದೆ. ಉಪಹಾರ ಸೇವಿಸಲು ಒಂದು ಕ್ಯಾಂಟೀನ್ ವ್ಯವಸ್ಥೆ ಸಹ ಮಾಡಲಾಗಿದೆ.