ಹರಿಹರ:ನಗರಸಭೆಯಿಂದ ರಸ್ತೆ ಬದಿಗಳಲ್ಲಿ ನಿರ್ಮಿಸುವ ವಾಣಿಜ್ಯ ಮಳಿಗೆಗಳನ್ನು ನಿಯಮ ಬದ್ಧವಾಗಿ ನಿರ್ಮಿಸಬೇಕೆಂದು ಹೆಚ್ಚುವರಿ ಡಿ.ಸಿ ವೀರಮಲ್ಲಪ್ಪ ಪೂಜಾರ್ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಐಡಿಎಸ್‌ಎಸ್‌ಎಂಟಿ ಯೋಜನೆಯ ಆವರ್ತಕ ನಿಧಿಯಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಮತ್ತು ದುರಸ್ತಿ ಸಂಬಂಧಿಸಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾಣಿಜ್ಯ ಮಳಿಗೆಗಳ ಕಾಮಗಾರಿ ಕೈಗೊಳ್ಳುವ ವೇಳೆ ಮುಖ್ಯರಸ್ತೆ, ಹೆದ್ದಾರಿಗಳಿದ್ದರೆ ಅವುಗಳಿಂದ ಎಷ್ಟು ಅಂತರದಲ್ಲಿ ಮಳಿಗೆಗಳನ್ನು ನಿರ್ಮಿಸಬೇಕೆಂದು ಮಾಹಿತಿ ಪಡೆದು ಕಾಮಗಾರಿ ಕೈಗೊಳ್ಳಬೇಕು. ನಗರಸಭೆಯು ಸಾರ್ವಜನಿಕರಿಗೆ ಮಾದರಿಯಾಗಿರಬೇಕೆಂದು ಹೇಳಿದರು.
ಗಾಂಧಿ ವೃತ್ತದಲ್ಲಿರುವ ನಗರಸಭೆ ವಾಣಿಜ್ಯ ಸಂಕೀರ್ಣದ ಕೆಲ ಮಳಿಗೆಗಳು ಹಳೆ ಪಿ.ಬಿ.ರಸ್ತೆ ಅಭಿವೃದ್ಧಿ ಸಮಯದಲ್ಲಿ ಅಲ್ಪ ಪ್ರಮಾಣದಲ್ಲಿ ತೆರವುಗೊಳಿಸಲಾಗಿದೆ. ಇವುಗಳ ದುರಸ್ತಿಗೆ 36.50 ಲಕ್ಷ ರೂ., ಇಂದಿರಾ ಕ್ಯಾಂಟೀನ್ ಸಮೀಪದಲ್ಲಿರುವ ನಗರಸಭೆ ಜಾಗದಲ್ಲಿ ಮಳಿಗೆಗಳ ನಿರ್ಮಾಣಕ್ಕೆ 99.95 ಲಕ್ಷ ರೂ. ಕಾಮಗಾರಿ ಕೈಗೊಳ್ಳಬೇಕಿದೆ. ಈ ಸಂದರ್ಭದಲ್ಲಿ ನಿಯಮಾವಳಿ ಪಾಲನೆ ಮಾಡಬೇಕೆಂದರು.
ಬಳಿಕ ಪೌರಾಯುಕ್ತೆ ಎಸ್. ಲಕ್ಷ್ಮಿ ಮಾತನಾಡಿ, ನಗರಸಭೆ ಮಳಿಗೆಗಳಿಂದ 97 ಲಕ್ಷ ರೂ. ಬಾಡಿಗೆ ಸಂಗ್ರಹಿಸಲಾಗಿದೆ. 39 ಲಕ್ಷ ರೂ. ಬಾಕಿ ಇದೆ. ನೋಟಿಸ್ ಜಾರಿ ಮಾಡಿ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು. ಆಗಲೂ ಪಾವತಿ ಮಾಡದಿದ್ದರೆ ಅವರಿಂದ ಪಡೆದ ಠೆವಣಿ ಮೊತ್ತದಲ್ಲಿ ಕಡಿತಗೊಳಿಸಲಾಗುವುದೆಂದರು.
ಸಭೆಯಲ್ಲಿ ದೂಡಾ ಉಪ ನಿರ್ದೇಶಕ ರೇಣುಕಾಪ್ರಸಾದ್, ಎಇಇ ಎಸ್.ಎಸ್.ಬಿರಾದರ, ಎಇಗಳಾದ ಹೆಚ್.ಟಿ.ನೌಷಾದ್, ಅಬ್ದುಲ್ ಹಮೀದ್, ರಹಮಾನ್, ಆರ್‌ಒ ಮಂಜುನಾಥ್, ನಾಗರಾಜ್, ಕಿರಣ್‌ಕುಮಾರ್, ವಸಂತ್ ಹಾಗೂ ಜಗದೀಶ್ ಸೇರಿ ಹಲವರು ಹಾಜರಿದ್ದರು.