ದಾವಣಗೆರೆ: 'ಕಾರು ಕಳೆದು ಹೋಗಿದೆ ಸ್ವಾಮಿ ಹುಡುಕಿ ಕೊಡಿ' ಎಂದು ಕಾರು ಮಾಲೀಕನೋರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದ್ರೆ ಆ ಕಾರನ್ನು ಪೊಲೀಸರೇ ಓಡಿಸುತ್ತಿದ್ದುದು ಬೆಳಕಿಗೆ ಬಂದಿದೆ. ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದ ಕಾರನ್ನು ಮರಳಿ ಕೇಳಿದರೆ ಕಾರು ಮಾಲೀಕನ ಮೇಲೆ ಪೊಲೀಸರು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ದಾವಣಗೆರೆಯ ವಿದ್ಯಾನಗರದ ನಿವಾಸಿ ಗಿರೀಶ್ ತಮ್ಮ ಕಾರನ್ನು ಪರಮೇಶ್ ಎಂಬುವರಿಗೆ ಎರಡು ಮೂರು ದಿನಕ್ಕೆ ಓಡಿಸಲೆಂದು ಕೊಟ್ಟಿದ್ದರು. ಸ್ನೇಹಿತ ಪರಮೇಶ್ ಕಾರನ್ನು ಮರಳಿ ನೀಡದ್ದಕ್ಕೆ ಗಿರೀಶ್ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರೆ, ವಿದ್ಯಾನಗರ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಮಂಜುನಾಥ್ ಕಾರನ್ನು ಹುಡುಕಿ ಕೊಡುವ ಬದಲು ಅದೇ ಕಾರನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡು ಕಳುವಾದ ಕಾರಿನಲ್ಲಿ ಓಡಾಟ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದಾದ ನಂತರ ಪೊಲೀಸ್ ಪೇದೆ ಈ ಕಾರನ್ನು ಓಡಿಸುತ್ತಿದ್ದ ದೃಶ್ಯವನ್ನು ಗಿರೀಶ್ ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಈ ಕಾರು ನನ್ನದು ನಿಮ್ಮ ಬಳಿ ಹೇಗೆ ಬಂತು, ನೀವ್ಯಾಕೆ ಇದನ್ನು ಬಳಕೆ ಮಾಡುತ್ತಿದ್ದೀರಾ? ಎಂದು ಕೇಳಿದಾಗ ಕಾನ್ಸ್‌ಟೇಬಲ್ ಮಂಜುನಾಥ್ ಗಿರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದೆಲ್ಲದರ ಪರಿಣಾಮ ಆರೋಪಿ ಕಾನ್ಸ್‌ಟೇಬಲ್ ಈಗ ಅಮಾನತಾಗಿದ್ದಾರೆ.
ಎಸ್‌ಪಿ ಪ್ರತಿಕ್ರಿಯೆ: 'ಕಾರು ಪಡೆದುಕೊಂಡಿದ್ದ ಪರಮೇಶ್ ವಿಶಾಕ್ ಎಂಬುವವರಿಗೆ 5 ಲಕ್ಷ ರೂ ಸಾಲ ನೀಡಬೇಕಿತ್ತು. ಮಾಡಿದ್ದ ಸಾಲ ತೀರಿಸದಿದ್ದಕ್ಕೆ ವಿಶಾಕ್ ಈ ಕಾರನ್ನು ಪರಮೇಶ್ ಅವರಿಂದ ಪಡೆದಿದ್ದರು. ನಂತರ ವಿಶಾಕ್ ಪೊಲೀಸ್ ಕಾನ್ಸ್‌ಟೇಬಲ್ ಮಂಜುನಾಥ್ಗೆ ನೀಡಿದ್ದರು. ಇದು ಈ ಎಲ್ಲಾ ಅನಾಹುತಕ್ಕೆ ಕಾರಣವಾಗಿದೆ' ಎಂದು ಎಸ್‌ಪಿ ರಿಷ್ಯಂತ್ ಮಾಹಿತಿ ನೀಡಿದರು.
ಇದನ್ನೂ ಓದಿ: ಆಪತ್ಬಾಂಧವನಾಗಿ ಬೆಂಕಿ ನಂದಿಸಲು ಹೋಗಿ ಚಿನ್ನಾಭರಣ ಕದ್ದ ಆರೋಪಿ ಅರೆಸ್ಟ್