ದಾವಣಗೆರೆ: ಶಾಸಕರಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ಕೊಡಬೇಕೆಂಬ ಅಪೇಕ್ಷೆ ಅಷ್ಟೇ ನಮ್ಮದಾಗಿತ್ತು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಕುರಿತು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ಆತ್ಮೀಯ ಸ್ನೇಹಿತರು. ಸವದಿಯೇನೂ ನನ್ನ ಶತ್ರು ಅಲ್ಲ. ಸೋತವರಿಗೆ ಸಚಿವ ಸ್ಥಾನ ನೀಡುವುದಕ್ಕಿಂತ ಆರೇಳು ಬಾರಿ ಬಿಜೆಪಿಯಿಂದ ಗೆದ್ದು ಶಾಸಕರಾದವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದರು.
2013ರಲ್ಲಿ ನಾನು ಚುನಾವಣೆಯಲ್ಲಿ ಡುಮ್ಕಿ ಹೊಡೆದಿದ್ದೆ. 2018 ರಲ್ಲಿ ಲಕ್ಷ್ಮಣ್ ಸವದಿ ಡುಮ್ಕಿ ಹೊಡೆದಿದ್ದಾರೆ. ನಮ್ಮಿಬ್ಬರ ನಡುವೆ ವೈರತ್ವ ಇಲ್ಲ. ನನಗೆ ಸಚಿವ ಸ್ಥಾನ ಬೇಕಾಗಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಶಾಸಕನಾಗಿ, ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ದೇವೇಗೌಡರ ಬಗ್ಗೆ ಸಾಫ್ಟ್:
ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರು ಕರ್ನಾಟಕದಿಂದ ಪ್ರಧಾನಿಯಾದ ಏಕೈಕ ರಾಜಕಾರಣಿ. ಹಾಗಾಗಿ, ಅವರ ಬಗ್ಗೆ ಅಪಾರ ಗೌರವವಿದೆ. ರಾಜಕೀಯವಾಗಿ ವೈರಿಗಳಾಗಿರಬಹುದು. ಆದ್ರೆ, ದೇವೇಗೌಡರ ರಾಜಕೀಯ ಅನುಭವ ಕಡಿಮೆ ಏನಲ್ಲ. ಸಿಎಂ ಯಡಿಯೂರಪ್ಪ ಅವರು, ದೇವೇಗೌಡರಿಂದ ಸಲಹೆ ಕೇಳಿದ್ರೆ ತಪ್ಪೇನಿದೆ. ಹಿರಿಯರ ಸಲಹೆ ಪಡೆಯಬಾರದಾ? ಇದನ್ನೇ ಮಾಧ್ಯಮಗಳು ಬೇರೆ ರೀತಿ ಅರ್ಥೈಸುತ್ತಿವೆ ಎಂದು ಅಭಿಪ್ರಾಯಪಟ್ಟರು.
ದೇವೇಗೌಡರೇನೂ ನಮಗೆ ದುಷ್ಮನ್ ಅಲ್ಲ. ಆದ್ರೆ ಕಾಂಗ್ರೆಸ್ ಪಕ್ಷ ನಮಗೆ ಶಾಶ್ವತ ಶತ್ರು. ಧರ್ಮ ಒಡೆಯುವ ಕೆಲಸವನ್ನು ಮೊದಲಿನಿಂದಲೂ ಕಾಂಗ್ರೆಸ್ ಮಾಡಿಕೊಂಡು ಬರುತ್ತಿದೆ. ಕಾಂಗ್ರೆಸ್ ಕತ್ತರಿ ಇದ್ದ ಹಾಗೆ. ಧರ್ಮ ಹಾಗೂ ಜಾತಿ ನಡುವೆ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತದೆ ಎಂದು ರೇಣುಕಾಚಾರ್ಯ ಆರೋಪಿಸಿದ್ರು.