ದಾವಣಗೆರೆ: ಕಾಂಗ್ರೆಸ್ ಹೈಕಮಾಂಡ್ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೇ ವೇಳೆ ದಾವಣಗೆರೆಯ ಜಗಳೂರು ಹಾಗು ಹೊನ್ನಾಳಿ ಮತಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಜಗಳೂರಿಗೆ ಮಾಜಿ ಶಾಸಕ ಹೆಚ್ ಪಿ ರಾಜೇಶ್ ಬದಲಿಗೆ ಹೊಸಮುಖ ಚಿಕ್ಕಪನಹಳ್ಳಿ ದೇವೆಂದ್ರಪ್ಪ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಇನ್ನೊಂದೆಡೆ ಹೊನ್ನಾಳಿ ಮತಕ್ಷೇತ್ರಕ್ಕೆ ಮಾಜಿ ಶಾಸಕ ಡಿ.ಜಿ ಶಾಂತನಗೌಡರಿಗೆ ಮತ್ತೇ ಟಿಕೆಟ್ ಘೋಷಣೆ ಮಾಡಲಾಗಿದೆ.
ಹೊನ್ನಾಳಿಯಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಡಿಜಿ ಶಾಂತನಗೌಡರು ಕಣಕ್ಕಿಳಿದಿದ್ದಾರೆ. ಶಾಂತನಗೌಡರಿಗೆ ಟಿಕೆಟ್ ನೀಡಿ ಲಿಂಗಾಯತ ಅಸ್ತ್ರವನ್ನು ಕಾಂಗ್ರೆಸ್ ಪ್ರಯೋಗಿಸಿದೆ. ಹೊನ್ನಾಳಿಯಲ್ಲಿ ಗೆಲುವು ಸಾಧಿಸಲು ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಹಾಗಾಗಿ ಹಾಲಿ ಶಾಸಕ ರೇಣುಕಾಚಾರ್ಯ ವಿರುದ್ಧ ಲಿಂಗಾಯತ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.
ಇದಲ್ಲದೆ ಎಸ್ಟಿ ಮೀಸಲು ಕ್ಷೇತ್ರವಾದ ಜಗಳೂರಿನಲ್ಲಿ ಕೂಡ ಹಾಲಿ ಬಿಜೆಪಿ ಶಾಸಕ ಎಸ್ ವಿ ರಾಮಚಂದ್ರ ಅವರನ್ನು ಕಟ್ಟಿಹಾಕಲು ಎಸ್ಟಿ ಸಮುದಾಯದ ಅಭ್ಯರ್ಥಿಯಾದ ಚಿಕ್ಕಪ್ಪನಹಳ್ಳಿ ದೇವೆಂದ್ರಪ್ಪರನ್ನು ಕಣಕ್ಕಿಳಿಸಿದೆ. ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ಗೆ ಆಗಮಿಸಿದ್ದ ಚಿಕ್ಕಪ್ಪನಹಳ್ಳಿ ದೇವೆಂದ್ರಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಈಗಾಗಲೇ ಜಿಲ್ಲೆಯ ಏಳು ಮತ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದ್ದು, ಹರಿಹರ ಕ್ಷೇತ್ರದ ಟಿಕೆಟ್ ಘೋಷಣೆ ಇನ್ನೂ ಆಗಿಲ್ಲ.
ಎಂಪಿ ಪ್ರಕಾಶ್ ಪುತ್ರಿಯರಿಗೆ ಮಣೆ ಹಾಕದ ಕಾಂಗ್ರೆಸ್: ದಾವಣಗೆರೆ ಜಿಲ್ಲೆಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹರಪನಹಳ್ಳಿ ಮತಕ್ಷೇತ್ರಕ್ಕೆ ಮಾಜಿ ಡಿಸಿಎಂ ದಿ. ಎಂಪಿ ಪ್ರಕಾಶ್ ಪುತ್ರಿಯರಾದ ಎಂಪಿ ಲತಾ ಹಾಗು ಎಂಪಿ ವೀಣಾ ಅವರಿಗೆ ಟಿಕೆಟ್ ನೀಡದೆ ಎನ್. ಕೊಟ್ರೇಶ್ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಎನ್. ಕೊಟ್ರೇಶ್ ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಟಿಕೆಟ್ ದಕ್ಕಿಸಿಕೊಂಡಿದ್ದಾರೆ. ಹರಪನಹಳ್ಳಿಯಲ್ಲಿ ಪಂಚಮಸಾಲಿ ಸಮುದಾಯದ ಮತಗಳು ನಿರ್ಣಾಯಕ ಆಗಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಪಂಚಮಸಾಲಿ ಸಮಾಜದವರಿಗೆ ಟಿಕೆಟ್ ನೀಡಿದೆ ಎಂದು ಹೇಳಲಾಗ್ತಿದೆ. ಜಗಳೂರು ಮಾಜಿ ಶಾಸಕ ಹೆಚ್ ಪಿ ರಾಜೇಶ್ ಅವರಿಗೆ ಟಿಕೆಟ್ ಕೈ ತಪ್ಪಿದೆ.