ದಾವಣಗೆರೆ:ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಶ್ರೀಶೈಲ ಪೀಠದ ಜಗದ್ಗುರುಗಳು ಸಂತಾಪ ಸೂಚಿಸಿದರು. ಶ್ರೀಶೈಲದಲ್ಲಿ ಮಾತನಾಡಿದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಗಳು ಶಾಂತ ಮೂರ್ತಿಗಳಾಗಿದ್ದರು. ಅವರ ಅಗಲಿಕೆ ಇಡೀ ಸಂತ ಪ್ರಪಂಚಕ್ಕೆ ತುಂಬಲಾರದ ನಷ್ಟ ಹಾಗು ಸಂತ ಪ್ರಪಂಚ ಬಡವಾಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ಅವರು ಜ್ಙಾನ ಯೋಗಿಯನ್ನು ಕಳೆದುಕೊಂಡಿರುವ ನೋವು ನಮಗಿದೆ. ಅವರು ಬರೀ ಸ್ವಾಮೀಜಿಯಾಗಿ ಗುರುತಿಸಿಕೊಂಡಿಲ್ಲ ಉಪನಿಷತ್ತು, ಭಗವದ್ಗೀತೆ, ಸಿದ್ಧಾಂತ ಶಿಖಾಮಣಿ, ಸಾಕಷ್ಟು ಪ್ರವಚನ ನೀಡುವ ಮೂಲಕ ಪ್ರಖ್ಯಾತಿ ಹೊಂದಿದ್ದರು. ಎಂತಹದ್ದೇ ವಿಷಯವನ್ನು ಜನರಿಗೆ ಸರಳವಾಗಿ ವಿವರಿಸುತ್ತಿದ್ದರು. ಗ್ರಂಥಗಳನ್ನು ಬರೆದು ಆಧ್ಯಾತ್ಮ ಲೋಕಕ್ಕೆ ಮಹದುಪಕಾರವನ್ನು ಮಾಡಿದ್ದಾರೆ. ಅವರೊಂದಿಗಿನ ನೆನಪು ಎಂದು ಮರೆಯಲು ಸಾಧ್ಯವಿಲ್ಲ. ಸರಳ ಮತ್ತು ಸಜ್ಜನಿಕೆಯ ಜೀವನ ಸಾಗಿಸುವ ಮೂಲಕ ಮನೆ ಮಾತಾಗಿದ್ದರು ಲಕ್ಷಾಂತರ ಭಕ್ತರನ್ನು ಹೊಂದಿದ್ದ ಸಿದ್ದೇಶ್ವರ ಸ್ವಾಮೀಜಿಗಳ ಆತ್ಮಕ್ಕೆ ಶಾಂತಿ ಕೋರುವೆ ಎಂದು ಸಂತಾಪ ಸೂಚಿಸಿದರು.
ಶಾಸಕ ಶಾಮನೂರು ಶಿವಶಂಕರಪ್ಪ ಸಂತಾಪ:ದಾವಣಗೆರೆಯಲ್ಲಿ ಶಾಸಕ, ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿ ಸ್ವರ್ಗಸ್ಥರಾಗಿರುವುದು ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಲಕ್ಷಾಂತರ ಜನರು ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಯಾವುದಕ್ಕೂ ಆಸೆಯನ್ನು ಪಡದೆ, ಯಾರಿಗೂ ತೊಂದರೆ ನೀಡದೆ ಅವರ ಸಾವು ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪುರಸ್ಕಾರಗಳು ಬಂದರೂ ತಿರಸ್ಕಾರ ಮಾಡಿದ್ದರು ಎಂದು ಹೇಳಿದರು.