ದಾವಣಗೆರೆ:ಪಾಲಿಕೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಪಾದರಸದಂತೆ ಆದಷ್ಟು ಶೀಘ್ರ ಮುಗಿಸಿ ನಗರದ ಜನತೆಗೆ ಕುಡಿಯುವ ನೀರು, ಉತ್ತಮ ರಸ್ತೆ, ಬೀದಿ ದೀಪಗಳು ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ನಗರದ ಎಲ್ಲಾ ಕಾಮಗಾರಿಗಳನ್ನು ಆರಂಭಿಸಿ ಆದಷ್ಟು ಶೀಘ್ರ ನಿಗದಿತ ಅವಧಿಯಲ್ಲಿ ಕೆಲಸ ಪೂರೈಸಬೇಕು. ಸೀಲ್ ಡೌನ್ ಆದ ಕಂಟೇನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.
ಅಮೃತ್ ಯೋಜನೆಯಡಿ ಕೆಯುಐಡಿಎಫ್‍ಸಿ ವತಿಯಿಂದ ಕೈಗೊಳ್ಳಲಾಗಿರುವ ದಿನಪೂರ್ತಿ ಕುಡಿಯುವ ನೀರಿನ ಯೋಜನೆಯಾದ ಜಲಸಿರಿಯನ್ನು ಆದಷ್ಟು ಶೀಘ್ರವಾಗಿ ಸಂಪೂರ್ಣಗೊಳಿಸಿ ನಗರದ ಜನರಿಗೆ ನೀರು ಪೂರೈಕೆ ಮಾಡಬೇಕು ಎಂದರು.
ಸ್ಮಾರ್ಟ್ ಸಿಟಿ ಎಂಡಿ ಮತ್ತು ಜಲಸಿರಿ ಯೋಜನೆಯ ಅಧಿಕಾರಿ ರವೀಂದ್ರ ಮಲ್ಲಾಪರ ಮಾತನಾಡಿ, 2022ರ ಜನವರಿಗೆ ಜಲಸಿರಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ನೀಡಲಾಗಿದೆ. 50 ಝೋನ್‍ಗಳ ಪೈಕಿ 2 ಝೋನ್‍ಗಳಲ್ಲಿ ಕಾರ್ಯ ಪೂರ್ಣಗೊಳಿಸಿ ಡೆಮೋ ನೀಡಬೇಕಿತ್ತು. ಕೊರೊನಾ ಹಿನ್ನೆಲೆ ಈ ಕೆಲಸ ತಡವಾಗಿದೆ. ಡಿಸೆಂಬರ್ ಅಂತ್ಯದೊಳಗೆ ಈ ಎರಡು ಝೋನ್‍ಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಡೆಮೊಗೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಒಟ್ಟು 381 ಮನೆಗಳು ಮಂಜೂರಾಗಿದ್ದು, ಈ ಪೈಕಿ 244 ಗೃಹಗಳ ಮೇಲ್ಛಾವಣಿ ಪೂರ್ಣಗೊಂಡಿದೆ. 56 ಮನೆಗಳು ಲಿಂಟಲ್ ಹಂತದಲ್ಲಿದ್ದರೆ, 81 ತಳಪಾಯ ಹಂತದಲ್ಲಿವೆ. ಪಾಲಿಕೆಯು ಆಸ್ತಿ ತೆರಿಗೆ ವಸೂಲಾತಿಯಲ್ಲಿ 2018-19ರಲ್ಲಿ ಶೇ. 83, 2019-20ರಲ್ಲಿ ಶೇ. 83.49 ಪ್ರಗತಿ ಸಾಧಿಸಿದರೆ, 2020-21ರಲ್ಲಿ 0.24 ಪ್ರಗತಿ ಸಾಧಿಸಿದೆ.
ಈ ಕಾರಣ ಆಸ್ತಿ ತೆರಿಗೆ ಬಹುತೇಕ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆಗುತ್ತದೆ. ಈ ಬಾರಿ ಕೊರೊನಾ ಹಿನ್ನೆಲೆ ತೆರಿಗೆ ವಸೂಲಾತಿ ಕಡಿಮೆಯಾಗಿದೆ. ಆದ್ದರಿಂದ ಶೇಕಡಾ 5ರಷ್ಟು ವಿನಾಯಿತಿಯನ್ನು ಜೂನ್ ಅಂತ್ಯದವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು.