ದಾವಣಗೆರೆ :ಜಿಲ್ಲೆಯಲ್ಲಿ ಮೂರು ಪ್ರತಿಷ್ಟಿತ ಸಮುದಾಯಗಳು ಮೀಸಲಾತಿಗಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ರೂಪುರೇಷೆಗಳನ್ನು ಹಾಕಿಕೊಂಡಿವೆ. ಮೀಸಲಾತಿ ನೀಡುವಂತೆ ತೊಡೆತಟ್ಟಿರುವ ಆಯಾ ಸಮುದಾಯದ ಶ್ರೀಗಳ ನಡೆ ರಾಜ್ಯ ಸರ್ಕಾರಕ್ಕೆ ತಲೆಬಿಸಿಯಾಗಿ ಪರಿಣಮಿಸಿದೆ.
ಸಮುದಾಯಗಳು ಮೀಸಲಾತಿಗಾಗಿ ಸರ್ಕಾರದ ವಿರುದ್ಧ ಹೋರಾಟ ಬಿ ಎಸ್ ಯಡಿಯೂರಪ್ಪನವರ ನೇತೃತ್ವದ ಸರ್ಕಾರಕ್ಕೆ ಹಲವು ಸಮಾಜಗಳಿಂದ ಮೀಸಲಾತಿ ಹೆಚ್ವಳ ಹಾಗೂ ಎಸ್ಟಿ ಸೇರ್ಪಡೆಗೆ ಒತ್ತಾಯಗಳು ಹೆಚ್ಚಾಗುತ್ತಿವೆ. ಈಗ ಪರಿಶಿಷ್ಟ ಪಂಗಡಕ್ಕೆ ಕುರುಬ ಸಮಾಜ ಸೇರ್ಪಡೆಗೆ ಆಗ್ರಹಿಸಿ ಜನವರಿ 15ರಂದು ಹಾವೇರಿಯ ಕಾಗಿನೆಲೆ ಗುರುಪೀಠದಿಂದ ಬೆಂಗಳೂರಿವರೆಗೆ, ಕಾಗಿನಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಪಾದಯಾತ್ರೆ ನಡೆಸಲಿದ್ದಾರೆ. ಅದಕ್ಕೆ ಮಧ್ಯ ಕರ್ನಾಟಕ ದಾವಣಗೆರೆಯಿಂದಲೇ ಪೂರ್ವ ತಯಾರಿ ನಡೆಸಲಾಗುತ್ತಿದೆ.
ಕಳೆದ ಕೆಲ ದಿನಗಳ ಹಿಂದೆ ಕಾಗಿನೆಲೆಯ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು ಹಾಗೂ ಪ್ರದೇಶ ಕುರುಬ ಸಮಾಜ ಹಾಗೂ ಸಮಾಜದ ಕೆಲ ಸಚಿವರು, ಮುಖಂಡರು ದೆಹಲಿಗೆ ಹೋಗಿ ಅಲ್ಲಿ ಕೇಂದ್ರ ಸಚಿವರಿಗೆ ಎಸ್ಟಿ ಸೇರ್ಪಡೆ ಬಗ್ಗೆ ಮನವಿಯನ್ನು ಸಲ್ಲಿಸಿದ್ದಾರೆ.
ಓದಿ: ರಾಜ್ಯದಲ್ಲಿಂದು 1,280 ಕೊರೊನಾ ಕೇಸ್ ಪತ್ತೆ: 13 ಮಂದಿ ಬಲಿ
ಎಸ್ಟಿ ಮೀಸಲಾತಿ ಹೆಚ್ಚಿಸುವಂತೆ ರಾಜನಹಳ್ಳಿಯ ವಾಲ್ಮೀಕಿ ಶ್ರೀಗಳು ಕಳೆದ ವರ್ಷ ಪಾದಯಾತ್ರೆ ಮಾಡಿದ್ದು, ನಂತರ ಈ ವರ್ಷವೂ ಕೂಡ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಆದರೆ, ರಾಜ್ಯ ಸರ್ಕಾರದ ಸಚಿವರು ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳನ್ನು ಮನವೊಲಿಸಿ ಉಪವಾಸ ಸತ್ಯಾಗ್ರಹ ವಾಪಸ್ ಪಡೆಯುವಂತೆ ಮನವಿ ಮಾಡಿದ್ದರು.
ಅಲ್ಲದೆ ಡಿಸೆಂಬರ್ 10ರೊಳಗೆ ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ಘೋಷಣೆ ಮಾಡುವುದಾಗಿ ಸರ್ಕಾರ ತಿಳಿಸಿದೆ. ಇನ್ನು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂಬ ಕೂಗು ಕೇಳಿ ಬಂದಿದೆ. ಇದೇ ಡಿ.23ರಂದು ಮೀಸಲಾತಿಗಾಗಿ ಕೂಡಲಸಂಗಮದಿಂದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಂಡಿರುವುದು ಸಿಎಂ ಯಡಿಯೂರಪ್ಪನವರಿಗೆ ತಲೆಬಿಸಿಯಾಗಿ ಪರಿಣಮಿಸಿದೆ.
ಮಧ್ಯ ಕರ್ನಾಟಕದಿಂದ ಮೀಸಲಾತಿ ಹೋರಾಟಗಳು ಪ್ರಾರಂಭವಾಗಲಿವೆ. ಸರ್ಕಾರ ಯಾವ ರೀತಿ ನಿಭಾಯಿಸುತ್ತದೆಯೋ ನೋಡಬೇಕಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವಿಡುವ ಕೆಲಸ ಮಾಡಿದ್ರೆ, ಸರ್ಕಾರಕ್ಕೆ ಮಾತ್ರ ತೀವ್ರ ವಿರೋಧಗಳು ಸೃಷ್ಠಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.