ದಾವಣಗೆರೆ :ತಮ್ಮದೇ ಕ್ಯಾಬಿನೆಟ್ ಸಚಿವರ ಮೇಲೆ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ.
ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬರೋದಕ್ಕೆ ಕೆಲವರ ಶ್ರಮವಿಲ್ಲ, ರೆಸಾರ್ಟ್‌ನಲ್ಲಿ ಈ ಬಗ್ಗೆ ನಾನು ಹಮಾಲಿ ಮಾಡಿದ್ದೇನೆ.
ಕೆಲವು ಸಚಿವರ ದುರಹಂಕಾರ ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಮಾತನಾಡುತ್ತೇನೆ ಎಂದು ತಮ್ಮದೆ ಕ್ಯಾಬಿನೆಟ್ ಸಚಿವರ ವಿರುದ್ಧ ಗುಡುಗಿದರು.
ಸಚಿವರ ವಿರುದ್ಧವೇ ಶಾಸಕ ರೇಣುಕಾಚಾರ್ಯ ಮಾತನಾಡಿದರು.. ಬಿಜೆಪಿ ಒಳ್ಳೆಯ ಆಡಳಿತ ನೀಡಲಿ ಅನ್ನೋದು ಜನರ ಬಯಕೆ ಆಗಿದೆ. ರಾಜ್ಯದಲ್ಲಿ ಸಿಎಂ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಕ್ಯಾಬಿನೆಟ್‌ನಲ್ಲಿ ಕೆಲ ಸಚಿವರು ಸರಿಯಿಲ್ಲ. ಸಚಿವ ಸಂಪುಟದಲ್ಲಿ ಕೆಲ ಸಚಿವರ ವರ್ತನೆ ದುರಹಂಕಾರದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅವರಿಗೆ ಕಳಕಳಿ ಇಲ್ಲ. ಬದಲಾಗಿ ಅವರು ಅವರ ಕ್ಷೇತ್ರಕ್ಕೆ, ವಿಧಾನಸೌಧದ 3ನೇ ಕೊಠಡಿಗೆ ಮಾತ್ರ ಸೀಮಿತವಾಗಿದ್ದಾರೆ. ಜನರು ಅಧಿಕಾರ ಕೊಟ್ಟಿದ್ದು ಜನರ ಸೇವೆಗೆ ವಿನಃ ಲಾಭದಾಯಕ ಹುದ್ದೆ ಪಡೆಯೋದಕ್ಕಲ್ಲ.
ಇದರ ಬಗ್ಗೆ ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಬೇಕಿತ್ತು. ಅದು ಆಗಿಲ್ಲ, ನಾನು ಗಲಾಟೆ ಮಾಡಿದಾಗ ಅವತ್ತು ರಾತ್ರಿ 9 ಗಂಟೆಗೆ ಆದೇಶ ಕೊಟ್ಟಿದ್ದಾರೆ. ಇವರಿಗೆ ಬಿಜೆಪಿ ಶಾಸಕರು ಯಾರು ಅಂತ ಸರಿಯಾಗಿ ಹೆಸರು ಕೂಡ ಗೊತ್ತಿಲ್ಲ. ಇದರ ಬಗ್ಗೆ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಸಂಘ ಪರಿವಾರಕ್ಕೆ ಭೇಟಿ ಮಾಡಿ ಸಚಿವರ ವರ್ತನೆ ಬಗ್ಗೆ ಮಾತನಾಡಿದ್ದೇನೆ ಎಂದರು.
ಓದಿ:ಆರ್ಥಿಕ ಸಂಕಷ್ಟ ಸರಿದೂಗಿಸಲು ಪರ್ಯಾಯ ಆದಾಯ ಮಾರ್ಗೋಪಾಯ: ಹೇಗಿದೆ ಬೊಕ್ಕಸದ ಸ್ಥಿತಿಗತಿ?
ಈ ಸರ್ಕಾರ ಬರೋಕೆ ಒಬ್ಬಿಬ್ಬರ ಪಾತ್ರ ಇಲ್ಲ. ಯಡಿಯೂರಪ್ಪ, ಮೋದಿ ವರ್ಚಸ್ಸು ಹಾಗೂ ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಪರೋಕ್ಷವಾಗಿ ವಲಸೆ ನಾಯಕರಿಗೆ ಟಾಂಗ್ ನೀಡಿದರು.