ದಾವಣಗೆರೆ:ಶಾಸಕ ಎಂಪಿ ರೇಣುಕಾಚಾರ್ಯ ಅವರ ಶ್ರಮದ ಪ್ರಯತ್ನದಿಂದ 1933 ಕೋಟಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಹೊನ್ನಾಳಿ ತಾಲೂಕಿನಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನವಾಗಿದ್ದು, ಇದೊಂದು ದಾಖಲೆ, ಇಂತಹ ದಾಖಲೆ ಮಾಡುವುದಕ್ಕೆ ತಾಕತ್ ಇರುವುದು ಹೊನ್ನಾಳಿ ಹುಲಿಗೆ ಮಾತ್ರ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಂಪಿ ರೇಣುಕಾಚಾರ್ಯ ಅವರನ್ನು ಹಾಡಿಹೊಗಳಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಇಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಹೊನ್ನಾಳಿ ನ್ಯಾಮತಿ ತಾಲೂಕಿನ ಚಿತ್ರಣವನ್ನು ಬದಲಿಸಿದ್ದು ನಮ್ಮ ಹೊನ್ನಾಳಿ ಹುಲಿ, ಇಂಥಾ ಅಭಿವೃದ್ಧಿ ಕೇಂದ್ರದಲ್ಲಿ ಮೋದಿ ಹಾಗೂ ರಾಜ್ಯ ಸರ್ಕಾರ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯ. ಪ್ರವಾಹ ಬಂದು ಮನೆ ಹಾನಿಯಾಗಿ ಬಿದ್ದಿದ್ದ ಮನೆಗಳಿಗೆ ಕೇಂದ್ರದಿಂದ 1 ಲಕ್ಷ ಮತ್ತು ರಾಜ್ಯದಿಂದ 4 ಲಕ್ಷ ಒಟ್ಟು 5 ಲಕ್ಷ ರೂ ನೀಡಿದೆವು. ಅನೇಕ ಅಭಿವೃದ್ಧಿ ಯೋಜನೆ ನೀಡಲು ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯವಾಯಿತು ಎಂದು ಹೇಳಿದರು.
ರೈತರಿಗೆ ಲೈಫ್ ಇನ್ಸುರೆನ್ಸ್ ಕೊಟ್ಟು, ರೈತರ ಸಹಜ ಸಾವು ಅದರೂ ಎರಡು ಲಕ್ಷ ಕೊಡುವ ಸಹಾಯ ಮಾಡಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಬೆಳೆ ಹಾನಿಯಾಯಿತು. ಆ ವೇಳೆ ಕೂಡ ಡಬಲ್ ಇಂಜಿನ್ ಸರ್ಕಾರ ರೈತರ ಕೈ ಹಿಡಿತು. ನಾಲ್ಕು ಲಕ್ಷ ರೈತರಿಗೆ 300 ಕೋಟಿ ವೆಚ್ಚದಲ್ಲಿ ಬೆಳೆ ಪರಿಹಾರ ಕೊಟ್ಟಿದ್ದೇವೆ. ನಿಜವಾದ ಸಾಮಾಜಿಕ ನ್ಯಾಯ ಕೊಟ್ಟಿದ್ದು ಯಡಿಯೂರಪ್ಪ ಅವರು, ಭಾಗ್ಯಲಕ್ಷ್ಮಿ ಯೋಜನೆ, ಕನಕ ದಾಸರ ಜನ್ಮಸ್ಥಳ ಅಭಿವೃದ್ಧಿ, ಸೇವಲಾಲ್ ಜಯಂತಿ, ತಾಂಡಾಗಳ ಅಭಿವೃದ್ಧಿ ಮಾಡಿಸಿದರು ಎಂದು ಸಿಎಂ ಬೊಮ್ಮಾಯಿ ಮಾಜಿ ಸಿಎಂ ಅವರ ಗುಣಗಾನ ಮಾಡಿದರು.