ದಾವಣಗೆರೆ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದೆ. ಕಾಂಗ್ರೆಸ್ನ ಈ ಘೋಷಣೆ ಕುರಿತು ಟೀಕಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಜನರನ್ನು ಯಾಮಾರಿಸುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಅವರು ಹತಾಶರಾಗಿದ್ದಾರೆ ಎಂದಿದ್ದಾರೆ.
ಹರಿಹರದ ಹರ ಜಾತ್ರಾ ಮಹೋತ್ಸಕ್ಕೆ ತೆರಳುವ ಮುನ್ನ ನಗರದಲ್ಲಿ ಮಾತನಾಡಿದ ಅವರು, ಜನರಿಗೆ ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡುವುದು ಅಸಾಧ್ಯ ಎಂದು ಗೊತ್ತಿದೆ. ಆದರೂ ಕಾಂಗ್ರೆಸ್ ಘೋಷಣೆ ಮಾಡಿದ್ದಾರೆ. ಇನ್ನೂ ಬೇರೆ ಬೇರೆ ಆಶ್ವಾಸನೆಗಳು ಬರುತ್ತಿದೆ. ಕಾಂಗ್ರೆಸ್ ನವರು ಕೇಜ್ರಿವಾಲ್ ದಾರಿಯಲ್ಲಿ ಹೋಗುತ್ತಿದ್ದು, ಹೋಗಲಿ, ಜನರನ್ನು ಮರಳು ಮಾಡುವ ಕೆಲಸ ಮಾಡ್ತಿದ್ದು, ಜನರನ್ನು ಯಾಮಾರಿಸುತ್ತಿದ್ದಾರೆ. ಆದರೆ, ನಾವು ಈಗಾಗಲೇ ಮಾಡುತ್ತಿದ್ದೇವೆ ಎಸ್ಸಿ ಎಸ್ಟಿಗಳಿಗೆ 75 ಯೂನಿಟ್ ಅನ್ನು ಉಚಿತ ವಿದ್ಯುತ್ ಯೋಜನೆ ಜಾರಿಗೆ ತಂದಿದ್ದೇವೆ. ಅವರು ಕೇವಲ ಹೇಳುತ್ತಾರೆ ನಾವು ಮಾಡಿ ತೋರಿಸಿದ್ದೇವೆ ಎಂದರು.
ಜನಪರ ಬಜೆಟ್ ಮಂಡನೆ: ಬಜೆಟ್ ಪ್ರಕ್ರಿಯೆ ಶುರುವಾಗಿದೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ವಿಧಾನಸಭೆ ಜಂಟಿ ಅಧಿವೇಶನ ದಿನಾಂಕ ಗೊತ್ತು ಮಾಡಿದ್ದೇವೆ. ಬಜೆಟ್ ಅಧಿವೇಶನವನ್ನು ಫೆ.17ರಂದು ಮಾಡಬೇಕು ಎಂದುಕೊಂಡಿದ್ದು, ಅದಕ್ಕೆ ಪೂರ್ವಭಾವಿ ತಯಾರಿಯನ್ನು ಮಾಡಿದ್ದೇವೆ. ಕೆಲ ದಿನಗಳ ಹಿಂದೆ ಸಭೆ ಮಾಡಿದ್ದೇವೆ, ಹಣಕಾಸು ವ್ಯವಸ್ಥೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಎಲ್ಲ ಇಲಾಖೆಯಿಂದ ಹಣಕಾಸು ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಪ್ರಮುಖ ಸಭೆಗಳು ನಡೆಯುತ್ತಿವೆ.