ವಿರಕ್ತ ಮಠಕ್ಕೆ ಹರಿಹರ ಮಾಜಿ ಶಾಸಕ ಹೆಚ್ಎಸ್ ಶಿವಶಂಕರ್ ಭೇಟಿ ದಾವಣಗೆರೆ: ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯುವ ಮುರುಘಾಶ್ರೀ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ. ಕೋರ್ಟ್ ಆದೇಶ ಪಡೆದ ಬಳಿಕ ಪೊಲೀಸರಿಂದ ಬಂಧನ ಪ್ರಕ್ರಿಯೆ ನಡೆಯಲಿದೆ.
ಮುರುಘಾ ಶ್ರೀಗಳ ವಿರುದ್ಧದ ಎರಡು ಪೋಕ್ಸೋ ಪ್ರಕರಣಗಳ ಪೈಕಿ ಮೊದಲ ಪ್ರಕರಣದಲ್ಲಿ ಜಾಮೀನಿನ ಮೇಲೆ ಶನಿವಾರ ಬಿಡುಗಡೆಯಾಗಿದ್ದರು. ಇದೀಗ ಎರಡನೇ ಪ್ರಕರಣ ಸಂಬಂಧ ಶ್ರೀಗಳ ವಿರುದ್ಧ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ನ್ಯಾಯಧೀಶರಾದ ಬಿ ಕೆ ಕೋಮಲಾ ಅವರು ಈ ಆದೇಶ ಹೊರಡಿಸಿದ್ದಾರೆ.
ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳು ಜಾಮೀನು ಪಡೆದು ಜೈಲಿನಿಂದ ಶನಿವಾರ ಬಿಡುಗಡೆಯಾಗಿದ್ದರು. ಆ ಬಳಿಕ ದಾವಣಗೆರೆಯ ವಿರಕ್ತ ಮಠಕ್ಕೆ ತೆರಳಿ, ಅಲ್ಲೇ ವಾಸ್ತವ್ಯ ಹೂಡಿದ್ದರು. ಇದೀಗ ಬಂಧನ ವಾರೆಂಟ್ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಮಠಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ಬಂಧನ ವಾರೆಂಟ್ ಜಾರಿಯಾದ ಬೆನ್ನಲ್ಲೇ ಹರಿಹರ ಮಾಜಿ ಶಾಸಕ ಹೆಚ್ಎಸ್ ಶಿವಶಂಕರ್ ಅವರು ದಾವಣಗೆರೆ ನಗರದ ದೊಡ್ಡಪೇಟೆಯಲ್ಲಿರುವ ವಿರಕ್ತ ಮಠಕ್ಕೆ ದೌಡಾಯಿಸಿ ಮುರುಘಾ ಶರಣರನ್ನು ಭೇಟಿಯಾದರು. ಈ ವೇಳೆ ಭೇಟಿಗೂ ಮುನ್ನ ಮಾತನಾಡಿದ ಅವರು, ನಾವು ಇದನ್ನ ನಿರೀಕ್ಷಿಸಿರಲಿಲ್ಲ. 14 ತಿಂಗಳಿನಿಂದ ನಾವು ನೋವು ಅನುಭವಿಸಿಕೊಂಡು ಬಂದಿದ್ದೇವೆ, ಇದೇನು ಹೊಸದೇನಲ್ಲ, ನಾವು ಕಾನೂನಿಗೆ ತಲೆಬಾಗುತ್ತೇವೆ, ಶ್ರೀಗಳು ದೇಶದ ಕಾನೂನಿಗೆ ತಲೆಬಾಗ್ತಿನಿ ಅಂತ ಹೇಳಿದ್ದಾರೆ. ಕಾನೂನು ರೀತಿ ನಾವು ಹೋರಾಟ ಮಾಡ್ತೀವಿ ಎಂದು ಹೇಳಿದರು.
ದಾವಣಗೆರೆ ವಿರಕ್ತ ಮಠದ ಮುಂದೆ ಜಮಾಯಿಸುತ್ತಿರುವ ಭಕ್ತರು:ಶ್ರೀಗಳ ಬಂಧನಕ್ಕೆ ಮತ್ತೆ ವಾರೆಂಟ್ ಜಾರಿಯಾದ ವಿಚಾರ ತಿಳಿದು ದಾವಣಗೆರೆ ವಿರಕ್ತ ಮಠದ ಮುಂದೆ ಭಕ್ತರು ಜಮಾಯಿಸುತ್ತಿದ್ದಾರೆ. ಬಂಧನ ವಾರೆಂಟ್ ಜಾರಿ ಹಿನ್ನೆಲೆ ವಿರಕ್ತ ಮಠದಲ್ಲಿ ನೀರವ ಮೌನ ಆವರಿಸಿದೆ.
ಪ್ರಕರಣದ ಹಿನ್ನೆಲೆ: ಮಠದ ಅಧೀನದಲ್ಲಿದ್ದ ವಸತಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ಇಬ್ಬರು ಬಾಲಕಿಯರು ಮೈಸೂರಿನ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ಸೇರಿ ಐವರ ವಿರುದ್ಧ 2022ರ ಆಗಸ್ಟ್ 26ರಂದು ದೂರು ದಾಖಲಿಸಿದ್ದರು. ಆನಂತರ ಅದನ್ನು ವ್ಯಾಪ್ತಿ ಹೊಂದಿರುವ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು. ಶರಣರನ್ನು 2022ರ ಸೆಪ್ಟೆಂಬರ್ 1ರಂದು ಬಂಧಿಸಲಾಗಿತ್ತು.
ಇದನ್ನೂ ಓದಿ: ಮುರುಘಾ ಶರಣರ ಗದ್ದುಗೆಗೆ ಭೇಟಿ ಕೊಟ್ಟು ಆಶೀರ್ವಾದ ಪಡೆದ ಶಿವಮೂರ್ತಿ ಮುರುಘಾ ಶರಣರು