ದಾವಣಗೆರೆ: ಬಡ ಕುಟುಂಬದ ಯುವಕನಾದ ಪುನೀತ್ ಎಂಬಾತನನ್ನು ಆತನ ಬಾಲ್ಯ ಸ್ನೇಹಿತರೇ ಕೊಲೆ ಮಾಡಿರುವ ಘಟನೆ ಬೆಣ್ಣೆ ನಗರಿಯ ಗೌಡ್ರ ಕಳಸಪ್ಪನವರ ಕಣ ಎಂಬಲ್ಲಿ ನಡೆದಿದೆ.
ರಾಕಿ ಆಲಿಯಾಸ್ ರಾಕೇಶ್, ವಿನೋದ್ ಆಲಿಯಾಸ್ ವಿನೋದರಾಜ್ ಪುನೀತ್ ಮೇಲೆ ಹಲ್ಲೆ ಮಾಡಿ, ಆತನನ್ನು ಕೊಲೆ ಮಾಡಿದ್ದಾರೆ. ಟೈಲ್ಸ್ ಫಿಟಿಂಗ್ ಕೆಲಸ ಮಾಡುತ್ತ ಜೀವನದ ಬಂಡಿ ಸಾಗಿಸುತ್ತಿದ್ದ ಪುನೀತ್ ಹಲವು ಪ್ರಕರಣಗಳಲ್ಲಿ ಶಾಮೀಲಾಗಿ ಜೈಲು ಸೇರಿದ್ದನು. ಅವನನ್ನು ಕೊಲೆ ಮಾಡಲೆಂದೇ ಅವನ ಸ್ನೇಹಿತರಿಬ್ಬರು ಬೇಲ್ ಕೊಡಿಸಿ ಕರೆತಂದು ಬಳಿಕ ಪುನೀತ್ಗೆ ಮನಬಂದಂತೆ ಥಳಿಸಿ, ಕೊಲೆ ಗೈದಿದ್ದಾರೆ.
ದಾವಣಗೆರೆಯಲ್ಲಿ ಸ್ನೇಹಿತರಿಂದಲೇ ಯುವಕನ ಕೊಲೆ ಇದೇ ತಿಂಗಳ 25ರ ಸಂಜೆ ಮನೆಗೆ ಬಂದು ಮಲಗಿದ್ದ ಪುನೀತ್ ಆರೋಪಿಗಳಾದ ರಾಕೇಶ್, ವಿನೋದ ಬಂದ್ರೆ ಮನೆಯಲ್ಲಿಲ್ಲ ಎಂದು ಹೇಳುವಂತೆ ತಿಳಿಸಿದ್ದ. ನಿರೀಕ್ಷೆಯಂತೆ ಅವರಿಬ್ಬರೂ ಮನೆಗೆ ಬಂದು ಬಿಟ್ಟಿದ್ದರು. ಮಗ ಮಲಗಿದ್ದಾನೆ ನಾಳೆ ಬನ್ನಿ ಎಂದು ಪುನೀತ್ ತಾಯಿ ಹೇಳಿದರೂ, ಕೇಳದ ದುರುಳರಿಬ್ಬರು ಬಾಗಿಲು ಬಡಿದು ಅವನನ್ನು ಎಬ್ಬಿಸಿದ್ದಾರೆ. ಅವರಲ್ಲೊಬ್ಬ ಮನೆ ಒಳಗಿ ನುಗ್ಗಿ ಪುನೀತ್ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಇಬ್ಬರೂ ಸೇರಿ ಆತನನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದ್ದಾರೆ. ಪುನೀತ್‌ನ ತಲೆ ಮನೆಯಲ್ಲಿದ್ದ ಮೆಟ್ಟಿಲಿಗೆ ಬಡಿದು ತೀವ್ರ ರಕ್ತ ಸ್ರಾವದಿಂದ ಎಚ್ಚರ ತಪ್ಪಿದ್ದ, ಬಳಿಕ ಆತನನ್ನು ಜಿಲ್ಲಾಸ್ಪತ್ರೆಗೆ ತಮ್ಮದೆ ಸ್ಕೂಟಿಯಲ್ಲಿ ರವಾನಿಸಿದ್ದಾರೆ.
ಇದನ್ನೂ ಓದಿ:ತುಮಕೂರಲ್ಲಿ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ ಕೇಸ್: ಎಎಸ್ಐಗೆ 20 ವರ್ಷ ಜೈಲು ಶಿಕ್ಷೆ
ಮೆದುಳಿಗೆ ತೀವ್ರ ಪೆಟ್ಟಾದ ಹಿನ್ನೆಲೆ ತಕ್ಷಣಕ್ಕೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಲು ಜಿಲ್ಲಾಸ್ಪತ್ರೆ ವೈದ್ಯರು ಸೂಚಿಸಿದ್ದಾರೆ. ಅಲ್ಲಿಂದ ಆರೋಪಿಗಳಿಬ್ಬರೂ ಕಾಲ್ಕಿತ್ತಿದ್ದರಿಂದ ಪುನೀತ್ ತಾಯಿ ಹಾಗು ಸಹೋದರಿ ಶಿಲ್ಪಾ ಸಂಬಂಧಿಕರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೇ ಕಾರಣ ಮತ್ತೆ ಜಿಲ್ಲಾಸ್ಪತ್ರೆಗೆ ವಾಪಸ್ ಕರೆತಂದಿದ್ದಾರೆ. ಈ ಓಡಾಟದಲ್ಲೇ ಪುನೀತ್ ನಿತ್ರಾಣನಾಗಿದ್ದ. ಚಿಕಿತ್ಸೆ ಫಲಕಾರಿಯಾಗದೆ 28ರ ಬೆಳಗ್ಗೆ ಪುನೀತ್ ಮೃತಪಟ್ಟಿದ್ದಾನೆ. ಬಳಿಕ ಗಾಂಧಿನಗರ ಪೊಲೀಸರು ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಿಕೊಂಡಿದ್ದು, ಅದನ್ನು ಕೊಲೆ ಪ್ರಕರಣವಾಗಿ ಬದಲಾಯಿಸಿಕೊಂಡಿದ್ದಾರೆ. ಪುನೀತ್ ಮೃತಪಟ್ಟ 24 ಗಂಟೆಯಲ್ಲಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ಒಟ್ಟಾರೆ ಅಮಾಯಕ ಯುವಕ ಪುನೀತ್ ಜೈಲಿನಲ್ಲಿದ್ರೇ ಜೀವಂತವಾಗಿರುತ್ತಿದ್ದನು ಎಂದು ಹೆತ್ತ ಬಡ ಜೀವ ಮರಗುತ್ತಿದೆ. ಇತ್ತಾ ತಮ್ಮನನ್ನು ಕಳೆದುಕೊಂಡ ಸಹೋದರಿಗೆ ದಿಕ್ಕು ತೋಚದಂತಾಗಿದೆ. ಅದೇನೆ ಆಗಲಿ ಜಾಮೀನಿನ ಮೇಲೆ ಹೊರಬಂದು ಇಹಲೋಕವನ್ನೇ ತ್ಯಾಜಿಸಿದ್ದ ಪುನೀತ್ಗೆ ನ್ಯಾಯ ದೊರಕಬೇಕಾಗಿದೆ. ಜಾಮೀನಿನ ಮೇಲೆ ಪುನೀತ್‌ನನ್ನು ಜೈಲಿನಿಂದ ಹೊರಗೆ ಕರೆತಂದ ಸ್ನೇಹಿತರೇ ಆತನನ್ನು ಕೊಲೆ ಮಾಡಿದ್ದು ಏಕೆ? ಸಿಟ್ಟಿನ ಭರದಲ್ಲಿ ಹೊಡೆದ ಹೊಡೆತದಿಂದ ಏನಾದ್ರೂ ಪುನೀತ್ ಸಾವಿಗೀಡಾದ್ನಾ ಎಂಬುದು ಪೊಲೀಸರ ತನಿಖೆಯಿಂದ ಹೊರಬರಬೇಕಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ